ಮಂಗಳೂರು, ನ 8 (Daijiworld News/MB): ಇನ್ನೇನು ಯಾವುದೇ ದಿನ, ರಾಮ ಮಂದಿರ - ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡುವ ಸಾಧ್ಯತೆ ಇರುವುದರಿಂದ ಶಾಂತಿ ಸೌಹಾರ್ದತೆ ಕಾಪಾಡಲು ಹಾಗೂ ಎಲ್ಲಾ ಸನ್ನಿವೇಶಗಳನ್ನು ಎದುರಿಸಲು ದೇಶವೇ ಸಜ್ಜಾಗುತ್ತಿದೆ.
ತೀವ್ರ ಮುನ್ನೆಚ್ಚರಿಕೆಯ ಜೊತೆಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆಯಿಂದಿರುವ ಸೂಚನೆ ನೀಡಿದರ ಜೊತೆಗೆ ಹಲವು ಭದ್ರತಾ ಸಲಹೆಗಳನ್ನು ನೀಡಿದೆ. ಇದಲ್ಲದೇ ದೇಶದಾದ್ಯಂತ ಅನುಮಾನಾಸ್ಪದ ವ್ಯಕ್ತಿಗಳ ಫೋನ್ ಹಾಗೂ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದು ವದಂತಿಗಳನ್ನು ಹರಡದಂತೆ ಸೂಚನೆ ನೀಡಲಾಗಿದೆ.
ಇನ್ನು ಕೇಂದ್ರ ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ರಾಜ್ಯದಲ್ಲಿಯೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೋಮು ಸೂಕ್ಷ್ಮ ಪ್ರದೇಶ ಕರಾವಳಿಯಲ್ಲೂ ಪೊಲೀಸ್ ಇಲಾಖೆ ಭದ್ರತೆ ಬಿಗಿಗೊಳಿಸಿದೆ. ಈ ಕುರಿತು ಮಾತಾನಾಡಿದ ಮಂಗಳೂರು ಹಿರಿಯ ಪೊಲೀಸ್ ಅಧಿಕಾರಿ 'ಕರಾವಳಿಯಾದ್ಯಂತ ಕಟ್ಟೆಚ್ಚರವಹಿಸಲಾಗಿದ್ದು, ಅನುಮಾನಾಸ್ಪದ ವ್ಯಕ್ತಿಗಳ ಫೋನ್ ಮತ್ತು ಸಾಮಾಜಿಕ ಜಾಲತಾಣದ ಮೇಲೆ ನಿಗಾ ವಹಿಸಲು ಸೂಚನೆಗಳು ಬಂದಿವೆ' ಎಂದು ತಿಳಿಸಿದ್ದಾರೆ.
'ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎರಡು ಸಮುದಾಯದ ಸದಸ್ಯರೊಂದಿಗೆ ಮಾತಾನಾಡಿದ್ದು, ಧನಾತ್ಮಕ ಪ್ರತಿಕ್ರಿಯೆ ನೀಡಿ ಸಹಕರಿಸುವುದಾಗಿ ತಿಳಿಸಿದ್ದಾರೆ' ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.