ಮಂಗಳೂರು, ನ. 07 (DaijiworldNews/SM): ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ಕ್ಷಣಗಣನೆಗಳು ಆರಂಭಗೊಂಡಿದ್ದು, ಪ್ರಮುಖ ಪಕ್ಷಗಳಿಂದ ಬಿರುಸಿನ ಮತ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಒಂದೆಡೆಯಾದರೆ, ಪಕ್ಷೇತರ ಅಭ್ಯರ್ಥಿಗಳು ಕೂಡ ಅಷ್ಟೇ ಹುರುಪಿನಿಂದ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ಅತ್ತಾವರ 55ನೇ ವಾರ್ಡ್ ನಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಮುಹಮ್ಮದ್ ಬಶೀರ್ ಅವರು ಕಣದಲ್ಲಿದ್ದು, ಕದನ ಕುತೂಹಲವೆನಿಸಿಕೊಂಡಿದೆ.
ಅತ್ತಾವರ 55ನೇ ವಾರ್ಡ್ ನ ಸ್ವತಂತ್ರ್ಯ ಅಭ್ಯರ್ಥಿ ಮುಹಮ್ಮದ್ ಬಶೀರ್ ಸ್ಪರ್ಧೆ ಸಾಕಷ್ಟು ಕುತೂಹಲವೆನಿಸಿದೆ. ಬದುಕಿನುದ್ದಕ್ಕೂ ಸಮಾಜಸೇವೆಯಲ್ಲಿ ಸಾರ್ಥಕತೆಯನ್ನು ಕಂಡ ನೇತಾರರಾಗಿದ್ದಾರೆ. ಬಶೀರ್ ಅವರು ಸಮಾಜದಲ್ಲಿ ಅವಶ್ಯಕವಿರುವವರಿಗೆ ಸೇವೆ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯದ ಮೂಲಕ ಸಮಾಜದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಒಂದಿರುವ ವ್ಯಕ್ತಿಯಾಗಿದ್ದಾರೆ. ಇವರ ಸೇವೆಗೆ ಕ್ಷೇತ್ರದ ಜನತೆ ತಲೆಬಾಗುತ್ತಿದ್ದಾರೆ.
ಸೇವೆ, ನಿಸ್ವಾರ್ಥ ಸೇವೆಯಿಂದ ಜನತೆಯ ಪ್ರೀತಿ ಗಳಿಸಿರುವ ಬಶೀರ್ ಅವರು ಇದೀಗ ಅತ್ತಾವರ 55ನೇ ವಾರ್ಡಿನಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಸ್ಪರ್ಧೆಗೆ ಮುಂದಾಗಿದ್ದಾರೆ. ವಜ್ರ ಚಿಹ್ನೆಯಲ್ಲಿ ಅತ್ತಾವರದ 55ನೇ ವಾರ್ಡಿನಿಂದ ಕಣಕ್ಕಿಳಿದಿರುವ ಬಶೀರ್ ಮೂಲತಃ ಜೆಪ್ಪು ನಿವಾಸಿಯಾಗಿದ್ದಾರೆ. ಉದ್ಯಮಿಯಾಗಿಯೂ, ಶಿಕ್ಷಣ ಪ್ರೇಮಿ, ಸಮಾಜಸೇವಕನಾಗಿ, ಧಾರ್ಮಿಕ ಸಂಘಟಕನಾಗಿ ಸಾಮಾಜಿಕವಾಗಿ ಬಶೀರ್ ಗುರುತಿಸಿಕೊಂಡಿದ್ದಾರೆ.
ಮಂಗಳೂರಿನ ಶಕ್ತಿನಗರದಲ್ಲಿರುವ ಶ್ರೀ ಗಣೇಶ ಸೇವಾ ಟ್ರಸ್ಟ್ ನ ಟ್ರಸ್ಟಿಯಾಗಿ, ಸೇವಾಯೋಜನೆಯಾಗಿರುವ ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ಸೇರಿದಂತೆ ಉಜಿರೆಯಲ್ಲಿರುವ ಎಂಡೋಸಲ್ಫಾನ್ ಪೀಡಿತರ ಸಾನಿಧ್ಯ ಕೌಶಲ್ಯ ಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾಗಿಯೂ ಸೇವೆಸಲ್ಲಿಸಿದವರು ಮುಹಮ್ಮದ್ ಬಶೀರ್. ಇಷ್ಟೇ ಅಲ್ಲದೆ ಮಂಗಳೂರಿನ ಬೆಂದೂರಿನಲ್ಲಿರುವ ಸೈಂಟ್ ಆಗ್ನೇಸ್ ವಿಶೇಷ ಶಾಲೆಯ ಶಿಕ್ಷಕ- ರಕ್ಷಕ ಸಂಘದ ಸದಸ್ಯನಾಗಿ, ಜಮಿಯ್ಯತ್ತುಲ್ ಫಲಾಹ್ ಮಂಗಳೂರು ನಗರ ಘಟಕದ ಮಾಜಿ ಅಧ್ಯಕರಾಗಿಯೂ ಇವರ ಸೇವೆ ಅಮೂಲ್ಯವಾಗಿದೆ.
ಜನರ ಸೇವೆಯ ಇಂಗಿತ:
ಪಾಲಿಕೆ ಚುನಾವಣೆಯಲ್ಲಿ ಗೆದ್ದು ಬಂದಲ್ಲಿ ನನಗೆ ಸಿಗಲಿರುವ ಗೌರವಧನವನ್ನು ವಾರ್ಡಿನ ಬಡಜನರ ಸೇವೆಗಾಗಿ ವಿನಿಯೋಗಿಸುತ್ತೇನೆ ಎನ್ನುವ ಇಂಗಿತವನ್ನು ಅವರು ವ್ಯಕ್ತಪಡಿಸಿದ್ದಾರೆ. ಈ ಮೂಲಕ ಜನರ ಸೇವೆಗಾಗಿಯೇ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ ಎಂಬ ಸಂದೇಶವನ್ನು ಬಶೀರ್ ಅವರು ಸ್ಪಷ್ಟವಾಗಿ ನೀಡಿದ್ದಾರೆ.