ಮಂಗಳೂರು,ಸೆ.02: ಪ್ರತೀ ಬಾರಿ ಒಂದಲ್ಲ ಒಂದು ಸುದ್ದಿಯಲ್ಲಿರುವ ಮಂಗಳೂರು ಜೈಲು ಇದೀಗ ಮತ್ತೆ ಸುದ್ದಿಯಲ್ಲಿದೆ. ಎರಡು ಕೋಮುಗಳ ನಡುವೆ ಸಂಘರ್ಷ ಏರ್ಪಟ್ಟಿದ್ದು, ವಿಚಾರಣಾಧೀನ ಕೈದಿಗಳ ನಡುವೆ ಹೊಡೆದಾಟ ಗುರುವಾರ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣದಲ್ಲಿ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಕೌಶಿಕ್ ಎಂಬಾತನಿಗೆ ಇನ್ನೊಂದು ಕೋಮಿಗೆ ಸೇರಿದ ತಂಡ ಹಲ್ಲೆ ಮಾಡಿದೆ. ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಅಧಿಕಾರಿಗಳ ಕಣ್ಣೆದುರಲ್ಲೇ ಹಲ್ಲೆ ನಡೆಸಿದ್ದು, ಸೀಮಿತ ಸಂಖ್ಯೆಯಲ್ಲಿದ್ದ ಅಧಿಕಾರಿಗಳಿಗೆ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ಮಂಗಳೂರು ಜೈಲಿನಲ್ಲಿ 210 ಮಂದಿ ಕೈದಿಗಳನ್ನು ಮಾತ್ರ ಇಡಲು ಸ್ಥಳಾವಕಾಶ ಇದೆ. ಆದರೆ ಇಲ್ಲಿ 420 ಮಂದಿ ಕೈದಿಗಳು ಇದ್ದಾರೆ. ಇದೇ ಕಾರಣಕ್ಕೆ ಇಲ್ಲಿ ನಿತ್ಯ ಸಂಘರ್ಷ ಏರ್ಪಡುತ್ತಿದ್ದು, ಇದನ್ನು ನಿಯಂತ್ರಿಸಲು ಅಧಿಕಾರಿಗಳಿಂದ ಸಾಧ್ಯವಾಗ್ತಾ ಇಲ್ಲ ಎಂದು ಹೇಳಲಾಗಿದೆ. ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.