ಮಂಗಳೂರು, ನ 7 (Daijiworld News/MSP): ಮಹಾನಗರ ಪಾಲಿಕೆ ಚುನಾವಣೆಗೆ ಇನ್ನೂ ಐದು ದಿನಗಳಷ್ಟೇ ಬಾಕಿಯಿದ್ದು ಪಾಲಿಕೆಯ ಎಲ್ಲಾ 60 ವಾರ್ಡ್ ಗಳಲ್ಲೂ ಚುನಾವಣೆಯ ಕಾವು ಜೋರಾಗಿದೆ. ಕಳೆದ ಅವಧಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಜನಪ್ರತಿನಿಧಿಯಾಗಿ ಸೇವೆ ಸಲ್ಲಿದ ಅನೇಕರಲ್ಲಿ ಈ ಬಾರಿಯೂ ಸ್ಪರ್ಧೆಗೆ ಇಳಿದವರು ಪ್ರಕಾಶ್ ಬಿ ಸಾಲ್ಯಾನ್. ಇವರು ತಮ್ಮ ಹಿಂದಿನ ಅಂದರೆ 30 ನೇ ಕೊಡಿಯಾಲ್ ಬೈಲ್ ವಾರ್ಡ್ ನಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.
ಪಾಲಿಕೆಯ ಸದಸ್ಯನಾಗಿದ್ದ ಸಂದರ್ಭದಲ್ಲಿ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದ್ದು ಇವುಗಳಲ್ಲಿ ಬಿಜೈ ಲೂಡ್ಸ್ ವಿದ್ಯಾಸಂಸ್ಥೆ ಬಳಿಯ ರಸ್ತೆ ವಿಸ್ತಾರ, ಬಲಿಪತೋಟ, ಭಾರತೀನಗರ, ಶ್ರಿದೇವಿ ಕಾಲೇಜು ಮೂಲಕ ಬಿಜೈ ಕೆಎಸ್ ಆರ್ ಟಿಸಿ ಸಂಪರ್ಕಿಸಲು ಭೂಸ್ವಾಧೀನ ಮೂಲಕ ರಸ್ತೆ ನಿರ್ಮಾಣ, ವಿಠೋಭಾ ಭಜನಾ ಮಂದಿರದ ಸಮುದಾಯ ಭವನಕ್ಕೆ ಅನುದಾನ ಪ್ರಮುಖವಾಗಿದೆ ಎನ್ನುತ್ತಾರೆ ಸಾಲ್ಯಾನ್.
ಇದರೊಂದಿಗೆ ಕೊಡಿಯಾಲ್ ಬೈಲ್ ಗುತ್ತು ರಸ್ತೆ, ಭಾರತೀ ನಗರ ಬಡಾವಣೆ, ಶ್ರೀ ದೇವಿ ಕಾಲೇಜು ರಸ್ತೆ , ವಿವೇಕ ನಗರ ರಸ್ತೆ , ಚಂದ್ರಿಕಾ ಬಡಾವಣೆಗೆ ಕಾಲುದಾರಿ ಅಭಿವೃದ್ಧಿ ಪಡಿಸಿ ಕಾಂಕ್ರೀಟಿಕರಣ ಸೇರಿದಂತೆ ವಾರ್ಡ್ ಒಳ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಶ್ರಮಿಸಿದ್ದೇನೆ. ವಾರ್ಡ್ ವ್ಯಾಪ್ತಿಯಲ್ಲಿ ಅನೇಕ ಕಿರುಸೇತುವೆಗಳ ನಿರ್ಮಾಣ, ಮಾರುಕಟ್ಟೆ ನಿರ್ಮಾಣ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ದಿ, ರಸ್ತೆಗಳ ಕಾಂಕ್ರೀಟಿಕರಣ, ರಾಜಕಾಲುವೆ ತಡೆಗೋಡೆ ನಿರ್ಮಾಣ, ಫುಟ್ ಪಾತ್ ಮತ್ತು ಚರಂಡಿ ಅಭಿವೃದ್ದಿ ಕಾರ್ಯ, ರಸ್ತೆ ಅಭಿವೃದ್ದಿ ಮುಂತಾದ ಕಾಮಗಾರಿಗಳಿಗಾಗಿ ಶ್ರಮಿಸಿದ್ದೇನೆ ಎಂದು ವಿವರಿಸುತ್ತಾರೆ.
ವಾರ್ಡಿನ ರಚನಾತ್ಮಕ ಅಭಿವೃದ್ದಿಗೆ ಇನ್ನು ಕನಸಿನ ಯೋಜನೆಗಳು ಬಹಳಷ್ಟಿದೆ ಇವೆಲ್ಲವನ್ನು ಕಾರ್ಯಗತಗೊಳಿಸಲು ಮತದಾರರ ಸಹಕಾರ ಅಗತ್ಯ ಎನ್ನುವ ಇವರು 30ನೇ ಕೊಡಿಯಾಲ್ ಬೈಲ್ ವಾರ್ಡ್ ನ್ನು ಮಂಗಳೂರಿನ ಮಾದರಿ ಕ್ಷೇತ್ರವನ್ನಾಗಿಸುವ ಕನಸನ್ನು ಹೊತ್ತು ಮತ್ತೆ ಪಾಲಿಕೆಯ ಚುನಾವಣೆಗೆ ಧುಮುಕಿದ್ದಾರೆ.