ಬಂಟ್ವಾಳ, ನ.07(Daijiworld News/SS): ಭೂಮಿಯಲ್ಲಿ ಮನುಷ್ಯ ಜೀವನ ಎಷ್ಟು ಶ್ರೇಷ್ಠ, ಅಷ್ಟೇ ಹಾಳು ಜೀವನವೂ ಮನುಷ್ಯನದ್ದೇ ಆಗಿದೆ. ಬುದ್ಧಿವಂತರ ಜಿಲ್ಲೆ ಎನಿಸಿರುವ ದ.ಕ.ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಅಪಘಾತ, ಅಪರಾಧ ಕೃತ್ಯಗಳಿಗೆ ಅಮಲು ಸೇವನೆಯೇ ಕಾರಣವಾಗಿದೆ ಎಂದು ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಅಭಿಪ್ರಾಯಪಟ್ಟರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿ, ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆ, ಮುಡಿಪು ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಶ್ರೀ ಕ್ಷೇತ್ರ ಕಣಂತೂರಿನ ವೈದ್ಯನಾಥ ಸಭಾಭವನದಲ್ಲಿ ಆರಂಭಗೊಂಡ 1428ನೇ ಮದ್ಯವರ್ಜನಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಹವಾಸ ದೋಷದಿಂದ ವ್ಯಕ್ತಿ ಹಾಳಾಗುತ್ತಾನೆ ಎನ್ನುವುದು ತಪ್ಪು, ನಮ್ಮ ಮನಸ್ಸು ಧೃಡವಾಗಿದ್ದರೆ ಸಹವಾಸ ದೋಷ ಬರಲು ಸಾಧ್ಯವೇ ಇಲ್ಲ. ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿದ್ದರೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರವೂ ಮಾಡದ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣ ಭಾಗದ ಜನರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಮೂಲಕ ವಿಭಿನ್ನ ಎನಿಸಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಮದ್ಯವರ್ಜನಾ ಶಿಬಿರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಮೇಶ್ ಶೇಣವ ಚಕ್ರಕೋಡಿ ಮಾತನಾಡಿ, ಮದ್ಯ ಸೇವಿಸುವವರ ಮನೆಯಲ್ಲಿ ಸದಾ ಕಣ್ಣೀರು ಇರುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಮನೆಯ ಕಣ್ಣೀರು ಒರೆಸುವ ಮದ್ಯವರ್ಜನಾ ಶಿಬಿರ ಆಯೋಜನೆ ಶ್ರೇಷ್ಠ ಕಾರ್ಯ ಎಂದು ತಿಳಿಸಿದರು.
ಶ್ರೀ. ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ಬಾಳೆಪುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲೀಲಾವತಿ, ಬಾಳೆಪುಣಿ ಒಕ್ಕೂಟದ ಅಧ್ಯಕ್ಷ ರವೀಂದ್ರ ಮುದುಂಗಾರುಕಟ್ಟೆ, ಮದ್ಯವರ್ಜನಾ ಸಮಿತಿಯ ಕೋಶಾಧಿಕಾರಿ ಮಹೇಶ್ ಚೌಟ, ಕಲ್ಲಡ್ಕ ಒಕ್ಕೂಟದ ವಲಯಾಧ್ಯಕ್ಷೆ ಜಯಂತಿ ಪೂಜಾರಿ, ಸಮಿತಿ ಸದಸ್ಯ ಪದ್ಮನಾಭ ರೈ, ಬಾಳೆಪುಣಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷ ರವೀಂದ್ರ ಕಡ್ವಾಯಿ, ಒಕ್ಕೂಟದ ಮುಡಿಪು ವಲಯಾಧ್ಯಕ್ಷ ನವೀನ್ ಪಾದಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.
ತಾಲೂಕು ಯೋಜನಾಧಿಕಾರಿ ಮೋಹನ ಕೆ. ಸ್ವಾಗತಿಸಿದರು. ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಡಿಪು ಜನಜಾಗೃತಿ ವಲಯಾಧ್ಯಕ್ಷ ಚಂದ್ರಶೇಖರ ಆಳ್ವ ವಂದಿಸಿದರು. ಮೇಲ್ವಿಚಾರಕಿ ಮೋಹಿನಿ ಹಾಗೂ ವಿನೋದ್ ಕಾರ್ಯಕ್ರಮ ನಿರೂಪಿಸಿದರು.