ಮಂಗಳೂರು, ನ 06 (Daijiworld News/MSP): ಧಾರ್ಮಿಕ ಕೇಂದ್ರಗಳು ಧಾರ್ಮಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ರಂಗಗಳಲ್ಲಿ ತೊಡಗಿಸಿಕೊಂಡು ಸಮಾಜದ ಕಟ್ಟಕಡೆಯ ವ್ಯಕ್ತಿಗಳ ನೋವು ನಲಿವುಗಳಿಗೆ ಸ್ಪಂದಿಸುವಂತಿರಬೇಕು ಹಾಗೂ ಅಸಕ್ತರ ಕಣ್ಣೀರು ಒರೆಸುವಂತಾಗಬೇಕು ಇದರಿಂದಾಗಿ ಸಂಸ್ಕಾರಯುತ ಸಮಾಜ ನಿರ್ಮಾಣ ಸಾಧ್ಯ ಎಂದು ನ್ಯಾಯವಾದಿ ಹಾಗೂ ಶ್ರೀ ಧರ್ಮಶಾಸ್ತ ಮಂದಿರ ಟ್ರಸ್ಟ್ (ರಿ) ಕುಲಶೇಖರ ಇದರ ಅಧ್ಯಕ್ಷ ರಾಮಪ್ರಸಾದ್ ಎಸ್. ಹೇಳಿದರು.
ಕುಲಶೇಖರ ಶ್ರೀ ಧರ್ಮಶಾಸ್ತ ಮಂದಿರದಲ್ಲಿ ಇತ್ತೀಚೆಗೆ ಜರುಗಿದ ’ಸಾಂಸ್ಕೃತಿಕ ಸಿಂಚನ 2019’ ಕಾರ್ಯಕ್ರಮದಲ್ಲಿ ಸಭಾ ವೇದಿಕೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ವರ್ಷಂಪ್ರತಿಯಂತೆ ಶ್ರೀ ಮಂದಿರದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಆಯೋಜಿಸಿದ್ದು, ಇದರಿಂದಾಗಿ ರಂಗೋಲಿ ಸ್ಪರ್ಧೆ, ಹೂಕಟ್ಟುವ ಸ್ಪರ್ಧೆ, ಶ್ರೀ ಅಯ್ಯಪ್ಪ ಸ್ವಾಮಿಯ ಚಿತ್ರ ಬಿಡಿಸುವ ಸ್ಪರ್ಧೆ, ಭಕ್ತಿಗೀತೆ ಹಾಗೂ ಭಾವಗೀತೆ ಸ್ಪರ್ಧೆಗಳು ಜರಗಿದುವು.
ಸಾಯಂಕಾಲ ಜರುಗಿದ ಸಾಂಸ್ಕೃತಿಕ ಸಿಂಚನದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆರೂರು ಪ್ರಸಾದ್ ರಾವ್, ಡಾ| ದಾಮೋದರ ನಾರಾಲು, ನ್ಯಾಯವಾದಿಗಳು, ವಿಜಯಗೌಡ ಶಿಬ್ರಿಕರೆ, ಹಾಗೂ ಹರೀಶ್ ಕೆ ಶಕ್ತಿನಗರ ಇವರೆಲ್ಲರೂ ಭಾಗವಹಿಸಿ ಮಂದಿರದ ಕಾರ್ಯಕ್ರಮಗಳನ್ನ ಶ್ಲಾಘಿಸಿದರು. ಮಂದಿರದ ಹಿರಿಯ ಕಾರ್ಯಕರ್ತರಾದ ಅಶೋಕ್ ಕೆ ಎಸ್ ಆರ್ ಟಿ ಸಿ ಹಾಗೂ ಶ್ರೀಮತಿ ಜಾನಕಿರವರನ್ನ ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು.
ಮಂದಿರದ ಪ್ರಧಾನ ಕಾರ್ಯದರ್ಶಿ ಶ್ರೀ ಮಹಾಲಿಂಗೇಶ್ವರ ಭಟ್ ಸ್ವಾಗತಿಸಿದರು. ವೇದಿಕೆಯನ್ನು ವಿವಧ ಸಾಮಿತಿಗಳ ಅಧ್ಯಕ್ಷರಾದ ಶ್ರೀ ಶ್ರೀನಿವಾಸ, ಶ್ರೀ ದಿನೇಶ್ ಜ್ಯೋತಿನಗರ, ಶ್ರೀಮತಿ ಸುಮಿತ್ರ ಹಾಗೂ ಕು| ಅಂಜುಶ್ರೀ ಉಪಸ್ಥಿತರಿದ್ದರು. ಟ್ರಸ್ಟಿ ಅಶೋಕ ಧನ್ಯವಾದ ಸಮರ್ಪಣೆಗೈದರು. ಶ್ರೀ ದಿನೇಶ್ ಸುವರ್ಣ ರಾಯ್ ಕಾರ್ಯಕ್ರಮ ನಿರ್ವಹಿಸಿದರು. ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.