ಮಂಗಳೂರು, ನ 6 (Daijiworld News/MB): ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಗಾಂಜಾ ಮಾಫಿಯಾವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳ ಮೇಲೆ ನಿಗವಹಿಸಬೇಕು ಮತ್ತು ಕಟ್ಟುನಿಟ್ಟಾಗಿ ಬ್ಯಾಗ್ ತಪಾಸಣೆ ನಡೆಸುವಂತೆ ಆಡಳಿತ ಮಂಡಳಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತಾನಾಡಿದ ಅವರು 'ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹಾಸ್ಟೆಲ್ ಗಳಲ್ಲಿ ಆಡಳಿತ ಮಂಡಳಿ ವಿದ್ಯಾರ್ಥಿಗಳ ಬ್ಯಾಗ್ ಗಳ ತಪಾಸಣೆ ನಡೆಸಬೇಕು. ಆಗಗೇ ತಪಾಸಣೆ ನಡೆಸುತ್ತಿರಬೇಕು. ಇಲ್ಲದಿದ್ದಲ್ಲಿ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
'ಇದಲ್ಲದೆ ಇಲಾಖೆ ವತಿಯಿಂದಲೂ ಶಾಲಾ ಕಾಲೇಜುಗಳಲ್ಲಿ ತಪಾಸಣೆ ನಡೆಸಲು ಸರ್ಚ್ ವಾರಂಟ್ ಹೊರಡಿಸಲು ಕೊರ್ಟ್ ಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.
'ನಗರದಲ್ಲಿ ಡ್ರಗ್ ಮಾಫಿಯ ನಿಯಂತ್ರಿಸಲು ಇಲಾಖೆಯ ವತಿಯಿಂದ ತಂಡ ರಚಿಸಲಾಗಿದೆ. ಈಗ ಸಣ್ಣ ಪುಟ್ಟ ಡ್ರಗ್ ಮಾರಾಟಗಾರರನ್ನು ಬಂಧಿಸಿದ್ದೇವೆ. ಆದರೆ ಈಗ ಡ್ರಗ್ ಮಾಫಿಯಾದ ಜಾಲವನ್ನೇ ಪತ್ತೆ ಹಚ್ಚಲ್ಲಿದ್ದೇವೆ’ ಎಂದು ಅವರು ತಿಳಿಸಿದರು.
'ನಮ್ಮ ದಾಳಿಯಿಂದ ಶಾಲೆಯ ಪ್ರತಿಷ್ಟೆಗೆ ದಕ್ಕೆಯಾಗುವ ಸಾಧ್ಯತೆಯಿದೆ. ಹಾಗಾಗಿ ಶಿಕ್ಷಣ ಸಂಸ್ಥೆ ಹಾಗೂ ಹಾಸ್ಟಲ್ ನ ಆಡಳಿತ ಮಂಡಳಿ ಖುದ್ದಾಗಿ ತಪಾಸಣೆ ನಡೆಸಬೇಕು’ ಎಂದು ಶಿಕ್ಷಣ ಸಂಸ್ಥೆಗೆ ತಿಳಿಸಿದ್ದಾರೆ.
'ಹಾಗೆಯೇ ಬಸ್ಸಿನ ಚಾಲಕರು ಪಾರ್ಸಲ್ ಗಳನ್ನು ತೆಗೆದುಕೊಳ್ಳುವಾಗ ಜಾಗೃತರಾಗಿರಬೇಕು. ಅದರಲ್ಲೂ ಗಾಂಜಾವಿರುವ ಸಾದ್ಯತೆ ಇರುತ್ತದೆ’ ಎಂದು ಹೇಳಿದ್ದಾರೆ.
'ಗಾಂಜಾ ಮಾರಾಟ ಪ್ರಕರಣದಲ್ಲಿ ಆರೋಪಿಗಳು ಹೆಚ್ಚಾಗಿ ಯುವಕರಾಗಿದ್ದಾರೆ. ಇದು ವಿಷಾದನೀಯ ವಿಚಾರ. ಯುವಕರು ಹಣದ ದುರಾಸೆಗೆ ತಮ್ಮ ಜೀವನವನ್ನೆ ಬಲಿಕೊಡಬಾರದು’ ಎಂದು ಯುವಕರಿಗೆ ಬುದ್ಧಿಮಾತು ಹೇಳಿದ್ದಾರೆ.