ಮಂಗಳೂರು ಜ 09: ಗೌರಿ ಲಂಕೇಶ್ ಹತ್ಯೆಯಾಗಿ 4 ತಿಂಗಳು ಕಳೆದರೂ ಇನ್ನೂ ಆರೋಪಿಗಳ ಬಂಧನವಾಗಿಲ್ಲ ಎಂದು ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಜ 9 ರ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ದೀಪಕ್ ರಾವ್ ಮತ್ತು ಬಷೀರ್ ಅವರ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಮನೆಯ ಸದಸ್ಯರನ್ನು ಕಳೆದುಕೊಂಡಾಗ ಆಗುವ ನೋವಿನ ಅರಿವು ನನಗಿದೆ. ಹೀಗಾಗಿ ಕಾಟಿಪಳ್ಳದಲ್ಲಿರುವ ದೀಪಕ್ ರಾವ್ ಹಾಗೂ ಬಶೀರ್ ಮನೆಗೆ ಭೇಟಿ ನೀಡಿ ಅವರಿಗೆ ಸಾಂತ್ವನ ಹೇಳಿ ಒಂದಿಷ್ಟು ಹಣಕಾಸಿನ ನೆರವನ್ನು ನೀಡಿದ್ದೇನೆ ಎಂದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ವಿಫಲವಾಗಿದೆ. ಆದರೆ ಇಂತಹ ಹತ್ಯೆಗಳು ರಾಜ್ಯದಲ್ಲಿ ನಡೆದು ಪ್ರತಿಭಟನೆಯ ಹಾದಿ ಹಿಡಿದಾಗ, ಸತ್ತವರ ಸಂಬಂಧಿಗಾಗಿ 10 ಲಕ್ಷ ರೂ ರೂ ನೀಡಿ ಇವೆಲ್ಲದಕ್ಕೂ ಪೂರ್ಣ ವಿರಾಮ ಹಾಕುವ ಸರಳ ಮಾರ್ಗ ಸರ್ಕಾರ ಕಂಡು ಹುಡುಕಿದೆ ಎಂದು ಕಿಡಿಕಾರಿದರು. ನಮ್ಮ ಸಹೋದರಿ ಗೌರಿಯನ್ನು ಕಳೆದುಕೊಂಡಿರುವ ನೋವಿನಿಂದ ಇನ್ನು ಹೊರಬರಲು ಸಾಧ್ಯವಾಗಿಲ್ಲ. ಆದರೆ ಗೌರಿ ಹತ್ಯೆ ವಿಚಾರದಲ್ಲೂ ಸರ್ಕಾರ ರಾಜಕೀಯ ಮಾಡುತ್ತಿದೆ. ಗೌರಿ ಹಂತಕ ಬಗ್ಗೆ ಸುಳಿವು ಇದೆ ಎನ್ನುವ ಸರ್ಕಾರ, ಹತ್ಯೆಯಾಗಿ ನಾಲ್ಕು ತಿಂಗಳು ಕಳೆದರೂ ಬಂಧಿಸುವ ಕೆಲಸ ಮಾಡುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದರು.