ಮಂಗಳೂರು, ಜ 9: ನದಿ ನೇತ್ರಾವತಿಯ ಕುದುರುವಿನಲ್ಲಿ ಇರುವ ದರ್ಗಾದ ಉರುಸ್ ಕಾರ್ಯಕ್ರಮಕ್ಕೆ ಹೋಗಲು ರಾಮ-ರಹೀಮರು ಸೇರಿಕೊಂಡು ತಾತ್ಕಾಲಿಕ ಸೇತುವೆ ನಿರ್ಮಿಸಿ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದ್ಧಾರೆ.
ಕರಾವಳಿಯಲ್ಲಿ ದೀಪಕ್ ರಾವ್ ಮತ್ತು ಬಶೀರ್ ಸಾವಿನಿಂದ ಭಯದ ವಾತಾವರಣ ನಿರ್ಮಾಣವಾಗಿತ್ತು. ಹಿಂದೂ ಮುಸ್ಲಿಂ ನಡುವೆ ದ್ವೇಷ ಇಲ್ಲದಿದ್ದರೂ ಕೆಲ ಕಿಡಿಗೇಡಿಗಳಿಂದಾಗಿ ಧರ್ಮದ ನಡುವೆ ಗಲಭೆ ಇಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಈ ನಡುವೆ ಕಣ್ಣೂರಿನ ನದಿ ನೇತ್ರಾವತಿ ಮಧ್ಯೆ ಕುದುರು ಒಂದರಲ್ಲಿ ನಡೆದ ಉರುಸ್ ಕಾರ್ಯಕ್ರಮ ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಗಿದೆ.
ಕಣ್ಣೂರಿನ ನದಿ ನೇತ್ರಾವತಿ ಮಧ್ಯೆ ನಡುಪಳ್ಳಿಯಲ್ಲಿ ರಹ್ಮಾನಿಯಾ ಮಸೀದಿ ವಠಾರದ ದರ್ಗಾದಲ್ಲಿ ಉರುಸ್ ಉತ್ಸವ ನಡೆದಿದ್ದು, ಈ ದರ್ಗಾಕ್ಕೆ ಹೋಗಲು ಅಡ್ಯಾರ್-ಕಣ್ಣೂರ್ ನಡುಪಳ್ಳಿಯ ಮಧ್ಯೆ ಸೇತುವೆ ಭಾಗ್ಯವಿಲ್ಲ. ಇದರಿಂದ ನದಿ ಬದಿಯಲ್ಲಿ ಮರಳುಗಾರಿಕೆ ನಡೆಸುವ ದಕ್ಕೆಯಲ್ಲಿ ಕೆಲಸ ಮಾಡುವ ಜನ ಒಟ್ಟಾಗಿ ತಮ್ಮ ದೋಣಿಗಳನ್ನೇ ಸಾಲಾಗಿ ನಿಲ್ಲಿಸಿ ಅದರ ಮೇಲೆ ಕಬ್ಬಿಣದ ಹಲಗೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಸೇತುವೆಯೊಂದನ್ನು ನಿರ್ಮಾಣ ಮಾಡಿದ್ದರು. ಸುಮಾರು 67 ದೋಣಿಗಳನ್ನು ಜೋಡಿಸಿ, ಅದರ ಮೇಲೆ ಕಬ್ಬಿಣದ ಹಲಗೆಯನ್ನು ಇಟ್ಟು ಈ ಮೂಲಕ ಭಕ್ತರಿಗೆ ಉತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಡಲಾಗಿತ್ತು.
ಸಾಲಾಗಿ ಜೋಡಿಸಿದ ದೋಣಿಗಳಲ್ಲಿ ಹಿಂದೂಗಳ ದೋಣಿಯೂ ಇದ್ದು, ಹಿಂದೂ- ಮುಸ್ಲಿಮ್ ಸೌಹಾರ್ದಕ್ಕೆ ಸಾಕ್ಷಿಯಾಯಿತು. ಸ್ವ-ಇಚ್ಛೆಯಿಂದ ಹಿಂದೂಗಳು ದೋಣಿಯನ್ನು ತಂದು ನಿಲ್ಲಿಸಿದ್ದರು. ಹಿಂದು – ಮುಸ್ಲಿಂ ಸೇರಿದಂತೆ ಸರ್ವ ಧರ್ಮದ ಜನ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.