ಬೆಳ್ತಂಗಡಿ, ನ 06 (DaijiworldNews/SM): ಮರೋಡಿ ಗ್ರಾಮದ ಪಲಾರಗೋಳಿ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿ ಇದರ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದ್ದು, ಸೋಮವಾರ ಮುಜರಾಯಿ, ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.
ಬಳಿಕ ಗರಡಿಯ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಚಿವರು, ಗರಡಿಯ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಅನುದಾನ ದೊರಕಿಸಿಕೊಡುವ ಭರವಸೆ ನೀಡಿದರು. ಅಲ್ಲದೆ, ಇದರ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಖುದ್ದಾಗಿ ಭಾಗವಹಿಸುವುದಾಗಿ ತಿಳಿಸಿದರು.
ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಗರಡಿಯನ್ನು ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗುತ್ತಿದ್ದು, ಗ್ರಾಮಸ್ಥರು ಶಕ್ತಿಮೀರಿ ಸಹಕಾರ ನೀಡುತ್ತಿದ್ದಾರೆ. ಸರ್ಕಾರದಿಂದ ಗರಿಷ್ಠ ಅನುದಾನ ನೀಡುವಂತೆ ಸಮಿತಿಯಿಂದ ಸಚಿವರಿಗೆ ಮನವಿ ಸಲ್ಲಿಸಲಾಯಿತು.