ಉಡುಪಿ, ನ 05 (DaijiworldNews/SM): ಅಕ್ಟೋಬರ್ ತಿಂಗಳ 11ರಂದು ಮಧ್ಯಾಹ್ನ ಪಾದೂರು ಗ್ರಾಮದ ಹೊಸಬೆಟ್ಟು ಬಸದಿಯ ಬಳಿ ಮಹಿಳೆಯೊಬ್ಬರ ಸರ ಕಳಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಶರು ಬಂಧಿಸಿದ್ದು, ಕಳವುಗೈದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಶಿರ್ಸಿ ಮೂಲದ ಅರವಿಂದ ನಾರಾಯಣ ನಾಯ್ಕ್ (34) ಬಂಧಿತ ಆರೋಪಿಯಾಗಿದ್ದಾನೆ.
ಗೀತಾ ಸುಜನ್ ಕುಮಾರ್ ತಮ್ಮ ಮನೆಯ ಸಮೀಪದಲ್ಲಿ ತರಕಾರಿ ಕೊಯ್ಯುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿಯು ಮನೆಯ ಬಳಿ ಇರುವ ತೋಟಕ್ಕೆ ಬಂದು ಮಹಿಳೆಯ ಕುತ್ತಿಗೆಯಲ್ಲಿದ್ದ ಸುಮಾರು 3 ½ ಪವನ್ ತೂಕದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ.
ಸರವನ್ನು ಬಲತ್ಕಾರವಾಗಿ ಎಳೆಯುವಾಗ ಗೀತಾರವರು ಅಡ್ಡಿಪಡಿಸಿದ್ದರಿಂದ ಕುತ್ತಿಗೆಯ ಬಳಿ ಹಾಗೂ ಕೈಗೆ ಮತ್ತು ಮೂಗಿನ ಕೆಳಗಡೆ ಗಾಯವಾಗಿದೆ. ಈ ಘಟನೆಯ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಕಾರ್ಯ ಪ್ರವೃತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಆರೋಪಿಯಿಂದ ಕಳವುಗೈದ ಮಾಂಗಲ್ಯ ಸರ ಮಾತ್ರವಲ್ಲದೆ ಈ ಹಿಂದೆ ಕಳಾವುಗೈದ ಚಿನ್ನಾಭರಣಗಳ ಸಹಿತ ಸುಮಾರು 1,46,200 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ಈತನ ವಿರುದ್ದ ಈ ಹಿಂದೆ ಮಲ್ಪೆ ಠಾಣೆ, ಶಿರ್ಸಿ ಠಾಣೆ, ಕುಮಟಾ ಠಾಣೆಗಳಲ್ಲಿ ಕಳವು ಪ್ರಕರಣ ಹಾಗೂ ಜೈಲಿನಲ್ಲಿರುವ ಆರೋಪಿಗಳೊಂದಿಗೆ ಸಂಪರ್ಕ ಇಟ್ಟುಕೊಂಡು ಹಣಕ್ಕಾಗಿ ಬೆದರಿಕೆ ಕರೆ ಮಾಡಿದ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.