ಕಾರ್ಕಳ ನ 05 (Daijiworld News/MB): ಸಾರ್ವಜನಿಕ ತಾಲೂಕು ಆಸ್ಪತ್ರೆಯ ನೂತನ ಕಟ್ಟಡವು ನ. 12ರಂದು ಲೋಕಾರ್ಪಣೆಯಾಗಲಿದೆ ಎಂದು ಶಾಸಕ ಹಾಗೂ ವಿಧಾನಸಭಾ ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ.
ವಿಕಾಸ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೋಗ್ಯ ಸಚಿವ ಬಿ. ಶ್ರೀರಾಮುಲು ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ. ಗೃಹ ಸಚಿವ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಯಿ ಶಸ್ತ್ರ ಚಿಕಿತ್ಸಾ ವಿಭಾಗವನ್ನು ಉದ್ಘಾಟಿಸಲಿದ್ದಾರೆ. ಮೀನುಗಾರಿಕಾ ಮತ್ತು ಬಂದರು ಹಾಗೂ ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಎಲ್ಲ ಹಂತದ ಜನಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಬಡವರಿಗೆ ಅನುಕೂಲ ಮಾಡಿಕೊಡುವ ಯೋಚನೆ ಹಾಗೂ ಯೋಜನೆಯ ನಿಟ್ಟಿನಲ್ಲಿ 8 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಪೂರ್ಣಗೊಂಡಿರುವ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ 100 ಹಾಸಿಗೆ ಸೇರಿದಂತೆ ಹತ್ತಾರು ಸೌಲಭ್ಯದೊಂದಿಗೆ ಒಳಗೊಂಡಿರುತ್ತದೆ. ತುರ್ತುಚಿಕಿತ್ಸಾ ವಿಭಾಗ, ಶಸ ಚಿಕಿತ್ಸಾ, ಪ್ರಯೋಗಶಾಲಾ, ಕ್ಷ ಕಿರಣ, ಹೆರಿಗೆ, ಡಯಾಲಿಸಿಸ್ ವಿಭಾಗ, ನವಜಾತ ಆರೈಕೆ ಘಟಕ, ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರ, ಸಂವಹನ ರಹಿತ ಕಾಯಿಲೆಗಳ ವಿಭಾಗ, ತೀವ್ರ ನಿಗಾ ಘಟಕ, ಸೋನಾಲಜಿ, ಆಪ್ತ ಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರ, ಔಷಧ ವಿತರಣಾ ಕೇಂದ್ರ, ಶೈತ್ಯಾಗಾರ, ಅಡುಗೆ ಕೋಣೆಯನ್ನು ನೂತನ ಕಟ್ಟಡ ಒಳಗೊಂಡಿದೆ. ಪ್ರಸ್ತುತ ಆಸ್ಪತ್ರೆಯಲ್ಲಿ 11 ಮಂದಿ ವೈದ್ಯರ ತಂಡ, 3 ಮಂದಿ ಆಯುಷ್ ಸಿಬ್ಬಂದಿ, 27 ಮಂದಿ ಶುಶ್ರೂಷಕಿಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಪ್ರವಾಸಿ ನಿರೀಕ್ಷಣಾ ಮಂದಿರ
ಕಾರ್ಕಳದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಪ್ರವಾಸಿ ನಿರೀಕ್ಷಣಾ ಮಂದಿರವು ಅಂದೇ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಸುನೀಲ್ಕುಮಾರ್ ಹೇಳಿದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಾವೀರ ಹೆಗ್ಡೆ, ವಕ್ತಾರ ಹರೀಶ್ ಶೆಣೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.