ಉಡುಪಿ , ನ 05 (Daijiworld News/MB): ಇಂದು ಬೆಳಿಗ್ಗೆ ಅಕ್ರಮ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ಕೇರಳ ರಿಜಿಸ್ಟ್ರೇಶನ್ನ ಮೂರು ಲಾರಿಗಳನ್ನು ಕಾಪು ಪೋಲಿಸರು ವಶ ಪಡಿಸಿಕೊಂಡಿದ್ದು, ಕೆಲ ಹೊತ್ತು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು.
ಸಾಂದರ್ಭಿಕ ಚಿತ್ರ
ಈ ಗೋವುಗಳನ್ನ ಕೇರಳದ ವಯನಾಡಿನಿಂದ ಧರ್ಮ ಫೌಂಡೇಶನ್ ಸಂಸ್ಥೆಯ ವತಿಯಿಂದ ಉಡುಪಿ ಜಿಲ್ಲೆಯ ಬಂಟಕಲ್ಲು ಅರಸಿಕಟ್ಟೆಯಲ್ಲಿರುವ ಗೋಶಾಲೆಯಲ್ಲಿ ಸಾಕುವ ಉದ್ದೇಶದಿಂದ ಕೊಂಡಯ್ಯಲಾಗುತ್ತಿದೆ ಎಮದು ಲಾರಿಯಲ್ಲಿ ಸಾಗಾಟ ಮಡುತ್ತಿದ್ದವರು ಹೇಳಿಕೊಂಡಿದ್ದರೂ, ಸ್ಥಳದಲ್ಲಿ ಸಾರ್ವಜನಿಕರು ಆಗಮಿಸಿ ಗೊಂದಲ ಏರ್ಪಟ್ಟಿತ್ತು.
ಈ ಸಂದರ್ಭ ಕಾಪು ಪುರಸಭೆಯ ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಮಾದ್ಯಮದ ಜೊತೆ ಮಾತನಾಡಿ, ಗೋಶಾಲೆಗೆ ಎಂದು ಮೂರು ಲಾರಿಗಳಲ್ಲಿ ಗೋವುಗಳನ್ನು ಅಮಾನವೀಯತೆಯತೆಯಿಂದ ಕೊಂಡೊಯ್ಯಲಾಗುತ್ತಿದೆ. ಅವರು ಗೋಶಾಲೆಗೆಂದು ಹೇಳುತ್ತಿದ್ದರೂ ನಾವು ಒಪ್ಪುವ ಸ್ಥಿತಿಯಲ್ಲಿಲ್ಲ. ಅಸ್ವಸ್ಥಗೊಂಡ ಗೋವುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕಾಗಿದೆ. ಮಾನವೀಯತೆಯ ದೃಷ್ಠಿಯಿಂದ ನಾವು ಎಲ್ಲಿ ಗೋಶಾಲೆಗೆ ಕೊಂಡೊಯ್ಯುತ್ತಾರೊ ಅಲ್ಲಿಗೆ ತೆರಳಿ, ಸೂಕ್ತವಾದ ವಿಚಾರಣೆ ನಡೆಸುತ್ತೇವೆ. ಈಗಾಗಲೇ ಒಂದು ಗೋವು ಮೃತ ಪಟ್ಟಿದ್ದು ಗೊತ್ತಾಗಿದೆ ಎಂದರು.
ಕಾಪು ಪೋಲಿಸ್ ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಮಾದ್ಯಮದೊಂದಿಗೆ ಮಾತನಾಡಿ, ಶಂಕರಪುರ ಸಮೀಪದ ಗೋಶಾಲೆಗೆ ಗೋವುಗಳನ್ನು ಸಾಗಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಗೋವುಗಳನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ. ಇದರಲ್ಲಿ ಒಂದು ಗೋವು ಸತ್ತಿದೆ. ನಾವು ಗೋವುಗಳನ್ನು ಲಾರಿಯಲ್ಲಿ ಅಕ್ರಮವಾಗಿ ಕೂಡಿಹಾಕಲಾದ ಬಗ್ಗೆ ಮತ್ತು ಮೋಟಾರು ವಾಹನ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸುತ್ತೇವೆ ಎಂದರು.
ಈ ಬಗ್ಗೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಗೋಶಾಲೆಗೆ ಭೇಟಿ ನೀಡಿ ಮತ್ತು ದಾಖಲೆ ಪರೀಶಿಲನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಯಾವುದೇ ಕಸಾಯಿಖಾನೆಗೆ ಸಾಗುವ ಗೋವುಗಳು ಅಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ವಿಶ್ವ ಹಿಂದೂ ಪರಿಷತ್ ನ ಪ್ರಖಂಡ ಸಂಚಾಲಕ ಜಯಪ್ರಕಾಶ್ ಪ್ರಭುರ ಹೇಳಿಕೆಯ ಪ್ರಕಾರ ಎಲ್ಲಾ ಗೋವುಗಳು ಸುರಕ್ಷಿತವಾಗಿದೆ ಮತ್ತು ತರಲಾಗಿದೆ.