ಮಂಗಳೂರು, ನ 05 (Daijiworld News/MB) : 'ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಈ ಬಾರಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ಭವಿಷ್ಯ ನುಡಿದ್ದಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನ. 3 ರ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಅವರು, ಈ ಬಾರಿಯ ಚುನಾವಣೆಯಲ್ಲಿ ಹಲವು ಮೂಲ ಕಾಂಗ್ರೆಸಿಗರಿಗೆ ಅನ್ಯಾಯವಾಗಿದೆ. ಅದರಿಂದ ಹಲವರಿಗೆ ಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಅಸಮಧಾನವಿದೆ. ಹೀಗಾಗಿ ಈ ಬಾರಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬರುತ್ತದೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ’ಎಂದು ಹೇಳಿದರು.
ಸಿದ್ದರಾಮಯ್ಯರವರ ನಾಯಕತ್ವವನ್ನು ನೀವು ಪ್ರಶ್ನಿಸಿದ್ದೀರಿ. ಆದರೆ ಅವರು ಈಗ ವಿರೋಧ ಪಕ್ಷದ ನಾಯಕರಾಗಿದ್ದಾರೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ‘ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಒಂದು ಶನಿ. ಅವರು ಪಕ್ಷವನ್ನು ನಾಶ ಮಾಡುತ್ತಾರೆ. ಕಾಂಗ್ರೆಸ್ ಹೈಕಮಾಂಡ್ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿ ತಪ್ಪು ಮಾಡಿದೆ’ ಎಂದು ಉತ್ತರಿಸಿದ್ದಾರೆ.
ಹರೀಶ್ ಹೇಳಿಕೆಯ ಬಗ್ಗೆ ಆಕ್ಷೇಪ ವ್ಯಕ್ತ ಪಡಿಸಿದ್ದ ಅವರು ‘ಈ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯ ಕುರಿತು ಕಾಂಗ್ರೆಸ್ ನ ದ.ಕ. ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ನನ್ನಲ್ಲಿ ಯಾವುದೇ ಸಲಹೆ ಕೇಳಿಲ್ಲ. ಪತ್ರಿಕಾಗೋಷ್ಠಿ ಸುಳ್ಳು ಹೇಳಿದ್ದಾರೆ. ನಾನು ಇದರಿಂದ ಬಹಳ ನೊಂದಿದ್ದೇನೆ. ಸಂಜೆಯ ಒಳಗಡೆ ಹರೀಶ್ ತನ್ನ ತಪ್ಪನ್ನು ಒಪ್ಪಿಕೊಳ್ಳಬೇಕು. ಕ್ಷಮೆ ಕೇಳಬೇಕು’ ಎಂದರು.