ಉಡುಪಿ, ನ 05(Daijiworld News/MSP): ಅಕ್ರಮ ರೈಲ್ವೆ ಟಿಕೆಟ್ ಮಾರಾಟ ಜಾಲವನ್ನು ರೈಲ್ವೆ ರಕ್ಷಣಾ ದಳದ ಅಧಿಕಾರಿಗಳು ಭೇದಿಸಿ ಕಾರವಾರ ಗ್ರೀನ್ ಸ್ವೀಟ್ ನ ಅಬ್ದುಲ್ ನಸೀರ್ ಇಬ್ರಾಹಿಂ ಶೇಖ್ ಎಂಬಾತನನ್ನು ಅ.29 ರಂದು ವಶಕ್ಕೆ ತೆಗೆದುಕೊಂಡಿದ್ದಾರೆ.
ಬಂಧಿತ ನಸೀರ್ ಇಬ್ರಾಹಿಂ ಶೇಖ್ ನಿಂದ ಮುಂಗಡ ಕಾಯ್ದಿರಿಸಿದ 20 ಟಿಕೆಟ್ ಗಳು ಹಾಗೂ ಹಿಂದಿನ ದಿನಾಂಕಗಳ 13 ಟಿಕೆಟ್ ಗಳುಕಂಪ್ಯೂಟರ್ 1020 ರೂ. ನಗದು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ಆತನಿಗೆ 5 ಸಾವಿರ ರೂ. ದಂಡ ವಿಧಿಸಿ ಬಿಡುಗಡೆ ಮಾಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಈತ ಭಾರತೀಯ ರೈಲ್ವೆಯ ಇ ಟಿಕೆಟ್ ಬುಕಿಂಗ್ ವ್ಯವಸ್ಥೆ ಐ ಆರ್ ಟಿ ಸಿ ಯಲ್ಲಿ ವಿವಿಧ ನಕಲಿ ಹೆಸರಿನಲ್ಲಿ ಖಾತೆ ತೆರೆದು ಸೀಟುಗಳನ್ನು ಬುಕ್ ಮಾಡುತ್ತಿದ್ದ. ಅಲ್ಲದೆ ಟಿಕೆಟ್ ಕೇಳಿಕೊಂಡು ಬರುತ್ತಿದ್ದ ಪ್ರಯಾಣಿಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದ. ಈ ಸಂಬಂಧ ರೈಲ್ವೆ ಇಲಾಖೆ ಕೇಂದ್ರ ಕಚೇರಿಗೆ ಅನುಮಾನ ಬಂದ ಹಿನ್ನಲೆಯಲ್ಲಿ ಪರಿಶೀಸಲು ಸ್ಥಳೀಯ ಆರ್ ಪಿ ಎಫ್ ಅಧಿಕಾರಿಗಳು ಕೆಲವು ಗೌಪ್ಯ ಕಾರ್ಯಾಚರಣೆ ನಡೆಸಿ ದಾಳಿ ನಡೆಸಿದಾಗ ಸಾಕಷ್ಟು ಟಿಕೆಟ್ ಪತ್ತೆಯಾಗಿದೆ.