ಕುಂದಾಪುರ, ನ 05 (Daijiworld News/MSP): ಕುಂದಾಪುರ ತಾಲೂಕಿನಲ್ಲಿ ಅವಕಾಶ ಇರುವ ನದಿಗಳಲ್ಲಿ ಮರಳುಗಾರಿಕೆ ಆರಂಭಿಸಲು ಒತ್ತಾಯಿಸಿ ನ.4 ರಂದು ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದ ವತಿಯಿಂದ ಕುಂದಾಪುರದಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ಹಾಲಾಡಿಯ ನಿವಾಸದ ತನಕ ಪಾದಯಾತ್ರೆ ನಡೆಸಿ, ಮನವಿ ಸಲ್ಲಿಸಿದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮನವಿ ಸ್ವೀಕರಿಸಿ ಮಾತನಾಡಿ, ಜಿಲ್ಲೆಯಲ್ಲಿ ಮರಳು ಸಮಸ್ಯೆ ಜನರನ್ನು ಕಾಡುತ್ತಿದೆ. ಮರಳು ಸಮಸ್ಯೆ ಪರಿಹಾರಕ್ಕಾಗಿ ಈಗಾಗಲೇ ಅನೇಕ ಪ್ರಯತ್ನಗಳನ್ನು ಮಾಡಲಾಗಿದೆ. ಡಾ| ವಿ.ಎಸ್. ಆಚಾರ್ಯ ಅವರು ಸಚಿವರಾಗಿದ ಕಾಲದಿಂದಲೂ ಮರಳುಗಾರಿಕೆ ಆರಂಭಕ್ಕಾಗಿ ಹೋರಾಟ ಮಾಡಿದ್ದೇನೆ. ಮರಳುಗಾರಿಕೆಗೆ ಸಂಬಂದಿಸಿದ ಅನೇಕ ಸಭೆಗಳಲ್ಲಿ ಬಡವರ ಹಾಗೂ ಕಾರ್ಮಿಕರ ಪರವಾಗಿ ಧ್ವನಿ ಎತ್ತಿದ್ದೇನೆ. ಮರಳು ಎಲ್ಲಾಗಿರಿಗೂ ಸುಲಭವಾಗಿ ಕಡಿಮೆ ದರದಲ್ಲಿ ಮರಳು ಸಿಗುವಂತೆ ಪ್ರಯತ್ನ ನಡೆಸುತ್ತಿದ್ದೇನೆ. ಈಗಾಗಲೇ ಕೆಲವು ಕಡೆಗಳಲ್ಲಿ ಮರಳು ಸಿಗುತ್ತಿದೆ. ಇದನ್ನು ಸಂಬಂದಪಟ್ಟರು ಪಡೆದುಕೊಳ್ಳಬಹುದಾಗಿದೆ. ತಾವೂ ನೀಡಿರುವ ಮನವಿಯನ್ನು ಸರಕಾರ ಮಟ್ಟದಲ್ಲಿ ಚರ್ಚಿಸಿ ಕೂಡಲೆ ಆರಂಭಗೊಳ್ಳದ ಪ್ರದೇಶಗಳಲ್ಲಿ ಮರಳುಗಾರಿಕೆ ಪ್ರಾರಂಭಿಸುವಂತೆ ಪ್ರಯತ್ನ ನಡೆಸುತ್ತೇನೆ ಎಂದರು.
ಪ್ರತಿಭಟನಗಾರು ಮನವಿಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಜಿಲ್ಲೆಯಲ್ಲಿ ಮರಳುಗಾರಿಕೆ ನಡೆಯದ ಹಿನ್ನಲೆಯಲ್ಲಿ ಬಡವರು, ಕಟ್ಟಡ ಕಾರ್ಮಿಕರು ಅರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಂಘಟನೆ ಈ ಹಿಂದೆ ಸರಕಾರಕ್ಕೆ ಸಮಸ್ಯೆ ಬಗೆಹರಿಸುವಂತೆ ಹಲವಾರು ಒತ್ತಾಯ ತರುವ ಹೋರಾಟಗಳನ್ನು ನಡೆಸಿದರು ಸಮಸ್ಯೆ ಪರಿಹಾರವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ್ ಬೊಮ್ಮಾಯಿ ಅವರು ಸೆ.27ರಂದು ಉಡುಪಿಗೆ ಬಂದಾಗ ಅ. 15ರ ಒಳಗೆ ಮರಳುಗಾರಿಕೆ ಆರಂಭಿಸುವ ಬರವಸೆ ನೀಡಿದರೂ, ಸಮಸ್ಯೆ ಮಾತ್ರ ಹಾಗೆಯೇ ಇದೆ. ಆದರಿಂದ ಶಾಸಕರು ಸರಕಾರದ ಮೇಲೆ ಒತ್ತಡ ತಂದು ಮರಳುಗಾರಿಕೆ ಆರಂಭಿಸುವಂತೆ ಒತ್ತಾಯಿಸಿದರು.
ಪಾದಯಾತ್ರೆಯಲ್ಲಿ ಕುಂದಾಪುರ ತಾಲೂಕಿನ ೬೦ಗ್ರಾಮಗಳ ಘಟಕಗಳಿಂದ ಸುಮಾರು ೨ಸಾವಿರ ಕಾರ್ಮಿಕರು ಪಾಲ್ಗೊಂಡರು. ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘಟನೆಯ ಮುಖಂಡರಾದ ಯು. ದಾಸ ಭಂಡಾರಿ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ ಕಲ್ಲಾಗರ, ಎಚ್. ನರಸಿಂಹ, ಮಹಾಬಲ ವಡೇರಹೋಬಳಿ, ಸಂತೋಷ ಹೆಮ್ಮಾಡಿ, ರಮೇಶ ಗುಲಾಡಿ, ಅರುಣಾ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.