ಮಂಗಳೂರು, ನ 04 (DaijiworldNews/SM): ಮಹಾನಗರ ಪಾಲಿಕೆಯ ಕುಡಿಯುವ ನೀರಿನ ದರ ಏರಿಸುವ ಮೂಲಕ ಕಾಂಗ್ರೇಸ್ ಆಡಳಿತವು ಜನರನ್ನು ಲೂಟಿ ಮಾಡಿದೆ. ಏಕಾಏಕಿ ಏರಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಕಳೆದ ಐದು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆಯು ಕುಡಿಯುವ ನೀರಿನ ಬಿಲ್ಲುಗಳನ್ನು ಜಾರಿಗೊಳಿಸುವಲ್ಲಿ ಹಾಗೂ ದರ ವಸೂಲಾತಿಯಲ್ಲಿ ವೈಫಲ್ಯ ಕಂಡಿರುವುದು ಎಲ್ಲರಿಗೂ ತಿಳಿದ ವಿಚಾರವಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಆಡಳಿತ ಮಾಡಿದ ಮೇಯರ್ಗಳು ಕೂಡ ನೀರಿನ ಲಕ್ಷಗಟ್ಟಲೆ ಬಿಲ್ ಬಾಕಿಯಿರುವಂತಹ ವ್ಯಕ್ತಿ ಪಟ್ಟಿಯನ್ನು ಬಹಿರಂಗ ಪಡಿಸಿರುವುದು ನಮಗೆಲ್ಲರಿಗೂ ತಿಳಿದ ವಿಚಾರವಾಗಿ ಈ ಎಲ್ಲಾ ವೈಫಲ್ಯಗಳ ನಡುವೆ ಕಾಂಗ್ರೆಸ್ ಪಕ್ಷವು ನಗರ ಪಾಲಿಕೆಯಲ್ಲಿ ಆಡಳಿತಾಧಿಕಾರಿಯ ಅವಧಿಯಲ್ಲಿ ಏಕಾಏಕಿಯಾಗಿ ನೀರಿನ ದರವನ್ನು 3 ರಿಂದ 4 ಪಟ್ಟು ಏರಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ತೊಂದರೆಯನ್ನುಂಟು ಮಾಡಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೇಸ್ ಮತ್ತು ಜೆ.ಡಿ.ಎಸ್. ಸಮ್ಮಿಶ್ರ ಸರಕಾರ ಆಡಳಿತ ಇದ್ದ ಸಂದರ್ಭದಲ್ಲಿ, ಯು.ಟಿ.ಖಾದರ್ ರವರು ಜಿಲ್ಲಾ ಉಸ್ತುವಾರಿ ಆಗಿದ್ದ ಸಂದರ್ಭದಲ್ಲಿ ನೀರಿನ ದರ ಏರಿಸುವ ಮೂಲಕ ಜನ ವಿರೋಧಿ ನಿಲುವನ್ನು ತೋರಿಸಿದೆ. ಕಾಂಗ್ರೇಸ್ ಪಕ್ಷವು ನೀರಿನ ದರ ಏರಿಕೆ ಮಾಡಿ ನೀರು ಸರಬರಾಜನ್ನು ಸಮರ್ಪಕವಾಗಿ ಮಾಡದೆ ಜನರು ಪರದಾಡುವಂತೆ ಮಾಡಿದೆ. ಏರಿಕೆ ಮಾಡಿರುವ ದರವು ತೀರ ಅವೈಜ್ಞಾನಿಕವಾಗಿದೆ. ಈ ಹಿಂದೆ ಗೃಹ ಬಳಕೆಗೆ ತಿಂಗಳೊಂದಕ್ಕೆ ಕನಿಷ್ಠ ೨೪೦೦೦ ನೀರಿನ ಉಪಯೋಗಕ್ಕೆ ಅವಕಾಶವಿತ್ತು. ಇದನ್ನು ಏಕಾಏಕಿ ೮೦೦೦ ಕ್ಕೆ ಸೀಮಿತಗೋಳಿಸಿರುವುದು ಖಂಡನೀಯ.
ಇದರ ನಡುವೆ ಕಾಂಗ್ರೇಸ್ ಆಡಳಿತ ವೈಫಲ್ಯಗಳನ್ನು ಬಿಜೆಪಿ ಜನಪ್ರತಿನಿಧಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ. 5 ವರುಷ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಸಂದರ್ಭದಲ್ಲಿ ನೀರು ಪೂರೈಕೆ ಸುವ್ಯವಸ್ಥಿತವಾಗಿ ನಡೆಯುತ್ತಿತ್ತು. ಆದರೆ ಕಾಂಗ್ರೇಸ್ ಆಡಳಿತ ಅವಧಿಯಲ್ಲಿ ಮಳೆಗಾಲದ ಸಂದರ್ಭದಲ್ಲೂ ಸಮರ್ಪಕವಾಗಿ ನೀರು ಪೂರೈಸಲು ಕಾಂಗ್ರೇಸ್ ಆಡಳಿತ ವೈಫಲ್ಯ ಕಂಡಿದೆ.