ಮಂಗಳೂರು, ನ 04 (DaijiworldNews/SM): 2017ರ ಕ್ರಿಸ್ಮಸ್ ಸಂಭ್ರಮಾಚರಣೆ ಸಂದರ್ಭ ಪಾಂಡೇಶ್ವರ ಠಾಣಾ ವ್ಯಾಪ್ತಿಯ ಜಪ್ಪುವಿನಲ್ಲಿ ನಡೆದಿದ್ದ ಮೆಲ್ರಿಕ್ ಅಂಥೊನಿ ಡಿಸೋಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
ನಿಶಾಕ್ ಪೂಜಾರಿ, ವಿನೇಶ್ ಕುಮಾರ್, ಸಚಿನ್ ಶೆಟ್ಟಿ, ಗಣೇಶ್ ಕುಲಾಲ್, ಪ್ರವೀಣ್ ಪೂಜಾರಿ, ಸಂದೀಪ್ ಶೆಟ್ಟಿ ಎಂಬವರಿಗೆ ಶಿಕ್ಷೆಯಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ೪ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆ:
2016ರ ಮೇ ತಿಂಗಳಲ್ಲಿ ನಡೆದಿದ್ದ ಹಲ್ಲೆ ಪ್ರಕರಣವೊಂದರಲ್ಲಿ ಮೆಲ್ರಿಕ್ ಭಾಗಿಯಾಗಿದ್ದ. ಈ ಹಿನ್ನೆಲೆ ಆತನ ವಿರುದ್ಧ ಮತ್ತೊಂದು ತಂಡ ದ್ವೇಷಹೊಂದಿತ್ತು. ಅವಕಾಶಕ್ಕಾಗಿ ಕಾಯುತ್ತಿದ್ದ ತಂಡ 2017ರ ಕ್ರಿಸ್ಮಸ್ ಹಬ್ಬದಂದು ಮೆಲ್ರಿಕ್ ಗೆ ಮುಹೂರ್ತ ನಿಗದಿ ಪಡಿಸಿತ್ತು. ಅದರಂತೆ ರಾತ್ರಿ ಮೆಲ್ರಿಕ್ ಮನೆಗೆ ಎಂಟ್ರಿಕೊಟ್ಟ ತಂಡ ಮಾರಕಾಸ್ತ್ರಗಳಿಂದ ಕಡಿದು ಆತನನ್ನು ಹತ್ಯೆಗೈದಿದೆ.
ಬಳಿಕ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸ್ ಅಧಿಕಾರಿ ಬೆಲ್ಲಿಯಪ್ಪ ನೇತೃತ್ವದ ತಂಡ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ನ್ಯಾಯಾಧೀಶ ರಾಮಲಿಂಗೇ ಗೌಡ ಇಂದು ತೀರ್ಪು ನೀಡಿದ್ದಾರೆ ಎಂದು ಸರಕಾರಿ ಅಭಿಯೋಜಕ ಹರಿಶ್ಚಂದ್ರ ಉದ್ಯಾವರ್ ದಾಯ್ಜಿ ವರ್ಲ್ಡ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.