ಉಡುಪಿ, ನ 04 (Daijiworld News/MSP): 'ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಡಿಯೋದಲ್ಲಿ ಹೇಳಿರೋದು ತಪ್ಪೇನಿಲ್ಲ, ಹೀಗಾಗಿ ಆಡಿಯೋ "ಬಾಂಬ್" ಆಗೋದಕ್ಕೆ ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ರಚನೆಯಾಗಿದ್ದು, ನಂಬರ್ ಗೇಮ್ ನಿಂದ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಅವರು ಸೋಮವಾರ ಬಿಜೆಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, " ಅನರ್ಹ ಶಾಸಕರು ಅವರಿಗೆ ಇಚ್ಚೆಯಿದ್ದ ಪಕ್ಷಕ್ಕೆ ಸೇರ್ಪಡೆಯಾಗಬಹುದು. ಆ ಅಧಿಕಾರ ಅವರಿಗಿದೆ. ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ. ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಶಾಸಕರ ರಾಜೀನಾಮೆಯಿಂದ ನಂಬರ್ ಗೇಮ್ ನಲ್ಲಿ ನಮ್ಮ ಸರಕಾರ ರಚನೆಯಾಗಿದೆ. ಇದನ್ನೇ ಯಡಿಯೂರಪ್ಪ ಮಾತನಾಡಿದ್ದಾರೆ. ಇದರಲ್ಲಿ ತಪ್ಪು, ಅನ್ಯಾಯದ ಪ್ರಶ್ನೆ ಬರಲ್ಲ. ಯಡಿಯೂರಪ್ಪ ಹೇಳಿರೋದ್ರಲ್ಲಿ ತಪ್ಪೇನಿದೆ. 17 ಜನ ಶಾಸಕರು ಇಚ್ಚೆ ಪಡುವ ಪಕ್ಷದಿಂದ ಸ್ಪರ್ಧೆ ಮಾಡುತ್ತಾರೆ. ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನ ಪಡುತ್ತಿದ್ದೇವೆ. ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು. ಅವರ ಅಭಿಪ್ರಾಯ ವ್ಯಕ್ತ ಪಡಿಸಲು ಅವರು ಸ್ವತಂತ್ರರು" ಎಂದು ಹೇಳಿದರು
ಕಾಂಗ್ರೆಸ್ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಶಾಸಕರು ರಾಜೀನಾಮೆ ಕೊಟ್ಟಿರುವ ಕಾರಣಕ್ಕಾಗಿ ನಮ್ಮ ಸರ್ಕಾರ ಬಂದಿದೆ ಎಂಬುದಾಗಿ ಹೇಳಿದ್ದಾರೆ. ಅದರಲ್ಲಿ ಯಾವುದೇ ತಪ್ಪಿದೆ ಎಂದು ಅನಿಸುತ್ತಿಲ್ಲ. ಸಿದ್ದರಾಮಯ್ಯನವರು ಡರ್ಟಿ ಗೇಮ್ ಮಾಡ್ತಾ ಇದ್ದಾರೆ. ನಿರಂತರವಾಗಿ ಬ್ಲಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದಂತವರು. ಯಾವಾಗ ಜೆಡಿಎಸ್ ಬಿಟ್ರೋ, ಆಗಿನಿಂತ ನಿರಂತರವಾಗಿ ಕಾಂಗ್ರೆಸ್ ಅನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಸಿದ್ದರಾಮಯ್ಯ ನವರ ಪಾಠ ಕೆಟ್ಟ ಪಾಠ, ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಆಗುತ್ತದೆ. ಜನ ಅವರನ್ನ ತಿರಸ್ಕರಿಸಿದ್ದಾರೆ ಮುಂದೆಯೂ ತಿರಸ್ಕರಿಸುತ್ತಾರೆ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.