ಮಂಗಳೂರು, ನ.04(Daijiworld News/SS): ನಗರದ ಹೊರವಲಯದ ಎನ್ಎಂಪಿಟಿಯ ಕಡಲ ತೀರಕ್ಕೆ ವಿದೇಶಿ ಐಶಾರಾಮಿ ನೌಕೆ ಐಡ ವಿಟ ವಿದೇಶಿ ಪ್ರವಾಸಿಗರೊಂದಿಗೆ ಆಗಮಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಎನ್ಎಂಪಿಟಿ ಅಧ್ಯಕ್ಷ ಎ.ವಿ. ರಮಣ್, ಕಳೆದ ವರ್ಷದಿಂದ ಸುಮಾರು 26 ವಿದೇಶಿ ಪ್ರವಾಸಿ ಹಡಗುಗಳು ಎನ್ಎಂಪಿಟಿಗೆ ಆಗಮಿಸಿವೆ. ಈ ವರ್ಷ ಈಗಾಗಲೇ 24 ಹಡಗುಗಳ ಆಗಮನ ದೃಢೀಕರಣಗೊಂಡಿವೆ. ಪ್ರತಿ ಹಡಗು 1000ಕ್ಕೂ ಅಧಿಕ ಪ್ರವಾಸಿಗರನ್ನು ಹೊತ್ತು ತರುತ್ತದೆ. ಪ್ರವಾಸಿಗರಲ್ಲಿ ಸುಮಾರು 400ರಿಂದ 500ರಷ್ಟು ಮಂದಿ ಎನ್ಎಂಪಿಟಿ ಬಂದರಿನ ಮೂಲಕ ನಗರದ ಕೆಲವು ಐತಿಹಾಸಿಕ ಹಾಗೂ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಈ ಸಂದರ್ಭ ಸಾಕಷ್ಟು ಸಾಕಷ್ಟು ಸಂಖ್ಯೆಯಲ್ಲಿ ಕರಕುಶಲ ವಸ್ತುಗಳು ಹಾಗೂ ಇಲ್ಲಿನ ಸಾಂಪ್ರದಾಯಿಕ ವಸ್ತುಗಳನ್ನು ಅವರು ಖರೀದಿಸುತ್ತಾರೆ ಎಂದು ಹೇಳಿದರು.
ವಿದೇಶಿ ಪ್ರವಾಸಿಗರಿಗೆ ಸ್ಥಳೀಯ ಕೆಲವು ಐತಿಹಾಸಿಕ ಸ್ಥಳಗಳಿಗೆ ಹಡಗು ತಂಗುವ ಸಮಯದಲ್ಲಿ ಭೇಟಿ ನೀಡುವ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಇದೀಗ ಹೆಲಿಕಾಪ್ಟರ್ ಸೇವೆಯ ಮೂಲಕ ದ.ಕ. ಜಿಲ್ಲೆ ಹಾಗೂ ನೆರೆಯ ಕೇರಳದ ಐತಿಹಾಸಿಕ ಸ್ಥಳಗಳ ವೈಮಾನಿಕ ಪ್ರವಾಸಕ್ಕೆ ಅವಕಾಶ ಲಭ್ಯವಾಗಲಿದೆ ಎಂದು ತಿಳಿಸಿದರು.
ಎನ್ಎಂಪಿಟಿಯಲ್ಲಿ ವಿದೇಶಿ ಪ್ರವಾಸಿಗರ ನಗರ ದರ್ಶನಕ್ಕೆ ಖಾಸಗಿ ಸಂಸ್ಥೆಗಳವರು ಆಟೋ, ಬಸ್ಸುಗಳ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ. ಇದರಿಂದ ಸಾಕಷ್ಟು ಉದ್ಯೋಗವಕಾಶಗಳೂ ಲಭ್ಯವಾಗುತ್ತದೆ. ಇದು ಕೇವಲ ಲಾಭ ಅಥವಾ ಆದಾಯ ಗಳಿಸುವ ಉದ್ದೇಶವಲ್ಲ. ಪ್ರವಾಸೋದ್ಯಮಕ್ಕೆ ಒತ್ತು ನೀಡಿ, ವಿದೇಶಿಗರಿಗೆ ತುಳುನಾಡಿನ ವೈಭವವನ್ನು ತೋರ್ಪಡಿಸುವುದು ಪ್ರಮುಖ ಧ್ಯೇಯ. ಇದೀಗ ಹೆಲಿಕಾಪ್ಟರ್ ಪ್ರವಾಸ ಈ ಉದ್ದೇಶಕ್ಕೆ ಮತ್ತಷ್ಟು ಪೂರಕವಾಗಿದೆ ಎಂದು ಹೇಳಿದರು.