ಮೂಡುಬಿದಿರೆ, ನ 03 (DaijiworldNews/SM): ಮೂಡುಬಿದಿರೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಾಂಧಿನಗರ ಎಂಬಲ್ಲಿ ಕಾಮಗಾರಿ ಹಂತದಲ್ಲಿದ್ದ ಮೋರಿಗೆ ಶನಿವಾರ ತಡರಾತ್ರಿ ಬೈಕ್ ಬಿದ್ದು ಸಹಸವಾರ ಮೃತಪಟ್ಟ ಘಟನೆ ನಡೆದಿದೆ.
ಬಜ್ಪೆ ನಿವಾಸಿ ಎಡಪದವಿನ ಚಿಕನ್ ಪಾಸೆಸಿಂಗ್ ಸೆಂಟರ್ನ ಕಾರ್ಮಿಕ ಪ್ರಜ್ವಲ್ ಆಚಾರ್ಯ(22) ಮೃತಪಟ್ಟ ಯುವಕ. ಇರ್ವತ್ತೂರಿನಲ್ಲಿ ಸ್ನೇಹಿತನೊಬ್ಬನ ತಂದೆಯ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡು ಮೂಡುಬಿದಿರೆ ಕಡೆಯಿಂದ ಬಜ್ಪೆಗೆ ಬೈಕ್ ನಲ್ಲಿ ತೆರಳುತಿದ್ದರು.
ಮೂಡುಬಿದಿರೆ ಪುರಸಭೆ ವ್ಯಾಪ್ತಿಯ ಗಾಂಧಿನಗರದಲ್ಲಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಹಾಗೂ ಮೋರಿಯ ಕಾಮಗಾರಿ ನಡೆಯುತ್ತಿದ್ದು, ರಾತ್ರಿ ವೇಳೆ ಮೋರಿಗೆ ಬಿದ್ದು ಪ್ರಜ್ವಲ್ ಎದೆ, ಮುಖ ಹಾಗೂ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯವಾಗಿದೆ. ತಕ್ಷಣ ಅವರನ್ನು ಮೂಡುಬಿದಿರೆ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಪ್ರಜ್ವಲ್, ಭಾನುವಾರ ನಸುಕಿನ ವೇಳೆ ಮೃತಪಟ್ಟಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.