ಉಡುಪಿ,ನ 03 (DaijiworldNews/SM): ಅಕ್ಟೋಬರ್ 11ರಂದು ಆತ್ಮಹತ್ಯೆಗೆ ಶರಣಾದ ಶಿರ್ವದ ಆರೋಗ್ಯ ಮಾತಾ ಚರ್ಚಿನ ಸಹಾಯಕ ಧರ್ಮಗುರುಗಳು ಹಾಗೂ ಡಾನ್ ಬೋಸ್ಕೋ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್ ಡಿಸೋಜ ಅವರ ಸಾವಿನ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳ್ಳುತ್ತಿದೆ. ಶನಿವಾರದಂದು ಆರಂಭವಾಗಿರುವ ಪ್ರತಿಭಟನೆ ರವಿವಾರವೂ ಕೂಡ ಮುಂದುವರೆದಿತ್ತು. ಪ್ರತಿಭಟನಾಕಾರರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಉನ್ನತಾಧಿಕಾರಿಗಳು ಎಸ್ಪಿ ನಿಶಾ ಜೇಮ್ಸ್, ರಾಜಕೀಯ ಮುಖಂಡರು ಭೇಟಿ ನೀಡಿ ಪ್ರತಿಭಟನಾಕಾರರ ಮನವೊಲಿಸಿದ್ದಾರೆ.
ಇದರಿಂದಾಗಿ ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡಲಾಗಿದ್ದು, ಮತ್ತೆ ಮಂಗಳವಾರದಂದು ಪ್ರತಿಭಟನೆ ನಡೆಸಲಾಗುವುದಾಗಿ ದಿ. ಫಾ. ಮಹೇಶ್ ಅಭಿಮಾನಿಗಳು ತಿಳಿಸಿದ್ದಾರೆ. ಶನಿವಾರದಂದು ಆರಂಭವಾದ ಪ್ರತಿಭಟನೆ, ರವಿವಾರವೂ ಮುಂದುವರೆಯಿತು. ರವಿವಾರ ಮುಂಜಾನೆಯೇ ಸಾಗರೋಪಾದಿಯಲ್ಲಿ ಸಮುದಾಯದ ಜನ ಶಿರ್ವ ಚರ್ಚ್ ಬಳಿ ಜಮಾಯಿಸಿದರು. ಪ್ರತಿಭಟನಾ ನಿರತರ ಆಕ್ರೋಶ ಹೆಚ್ಚುತ್ತಿದ್ದಂತೆ ಸ್ಥಳದಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಸಹಿತ ಭದ್ರತೆ ಹೆಚ್ಚಿಸಲಾಯಿತು. ಪೊಲೀಸರು ಹಾಗೂ ಪ್ರತಿಭಟನಾಕಾರ ನಡುವೆ ಮಾತಿನ ಚಕಮಕಿಯ ಘಟನೆಗಳು ಕೂಡ ನಡೆದವು. ಪ್ರತಿಭಟನಾಕಾರರನ್ನು ಎಷ್ಟೇ ಮನವೊಲಿಸಿದರೂ ಕೂಡ ಕೇಳದೆ, ಆಕ್ರೋಶ ಹೆಚ್ಚುತ್ತಲೇ ಹೋಯಿತು. ಆಕ್ರೋಶಿತ ಸ್ಥಳೀಯರು ಚರ್ಚ್ ಗಂಟೆ ಬಾರಿಸಲು ಮುಂದಾದಾದ ಅದಕ್ಕೆ ಪೊಲಿಸರು ತಡೆಯೊಡ್ಡಿದರು. ಈ ಸಂದರ್ಭ ಪೊಲೀಸರು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ.
ಇನ್ನು ನಿನ್ನೆ ಸಂಜೆ ವೇಳೆ ಏಕಾಏಕಿ ಶಿರ್ವ ಚರ್ಚ್ ನಲ್ಲಿ ಜಮಾಯಿಸಿದ ಸ್ಥಳೀಯರು ಫಾದರ್ ಮಹೇಶ್ ಡಿಸೋಜಾ ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರವಾಗಿ ರವಿವಾರ ಚರ್ಚ್ ಗೆ ಉಡುಪಿ ಬಿಷಪ್ ಭೇಟಿ ನೀಡಿ ಸಭೆ ನಡೆಸಿದ್ದಾರೆ. ಆದ್ರೆ, ಈ ವೇಳೆ ಪ್ರತಿಭಟನಾಕಾರರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಪ್ರಕರಣವನ್ನು ಕೈಬಿಡುವಂತೆ ಹಾಗೂ ಹೆಚ್ಚಿನ ವಿಚಾರಣೆ ನಡೆಸದಂತೆ ಮಹೇಶ್ ಕುಟುಂಬಸ್ಥರು ತಿಳಿಸಿದ್ದಾರೆ ಎಂದು ಉಡುಪಿ ಬಿಷಪ್ ಹೇಳಿದಾಗ ಧರಣಿ ನಿರತರ ಕೂಗು ಜಾಸ್ತಿಯಾಯಿತು. ಇನ್ನು ಪ್ರತಿಭಟನಾ ಸ್ಥಳಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತಿತರರು ಭೇಟಿ ನೀಡಿದರು.
ಸದ್ಯ ಪೊಲೀಸರ ಮನವರಿಕೆಯಿಂದ ಇಂದಿನ ಪ್ರತಿಭಟನೆಯನ್ನು ಕೈಬಿಡಲಾಗಿದ್ದು, ಮತ್ತೆ ಮಂಗಳವಾರದಂದು ಪ್ರತಿಭಟನೆ ನಡೆಸಲು ಮಹೇಶ್ ಅಭಿಮಾನಿಗಳು ನಿರ್ಧರಿಸಿದ್ದಾರೆ. ಒಟ್ಟಿನಲ್ಲಿ ಫಾ. ಮಹೇಶ್ ನಿಗೂಢ ಆತ್ಮಹತ್ಯೆ ಪ್ರಕರಣ ಇದೀಗ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಯಾವ ಕಾರಣಕ್ಕೆ ಫಾ. ಮಹೇಶ್ ಆತ್ಮಹತ್ಯೆ ಮಾಡಿಕೊಂಡರು ಎನ್ನುವುದು ನಿಗೂಢವಾಗಿಯೇ ಉಳಿದಿದ್ದು, ಅವರ ಅಭಿಮಾನಿಗಳ ಅನುಮಾನಕ್ಕೆ ಕಾರಣವಾಗಿದೆ. ಈ ಪ್ರಕರಣ ಮತ್ತಷ್ಟು ತೀವ್ರತೆ ಪಡೆಯುವ ಮುನ್ನ ಧಾರ್ಮಿಕ ಮುಖಂಡರು, ಅಧಿಕಾರಿಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ.