ಮಂಗಳೂರು ಜ 09: ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಜ 08 ರ ಸೋಮವಾರ ಸಂಜೆ ಕೈದಿಗಳ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ಸಂಭವಿಸಿ ನಾಲ್ವರು ಪೊಲೀಸರು ಮತ್ತು ಸುಮಾರು 10 ಕ್ಕೂ ಅಧಿಕ ಕೈದಿಗಳು ಗಾಯಗೊಂಡಿದ್ದಾರೆ. ಗಾಯಾಳು ಕೈದಿಗಳನ್ನು ಮತ್ತು ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಜೆ 6 ಗಂಟೆ ಸುಮಾರಿಗೆ ಎರಡೂ ಬ್ಲಾಕ್ ನಲ್ಲಿದ್ದ ಕೆಲವು ಕೈದಿಗಳ ಸಂದರ್ಶಕರ ಭೇಟಿಗಾಗಿ ಬಿಡಲಾಗಿತ್ತು. ಇದೇ ಸಮಯದಲ್ಲಿ ಕಲ್ಲಡ್ಕದ ಮಿಥುನ್ ಮತ್ತು ಶರತ್ ಮಡಿವಾಳ ಕೊಲೆ ಪ್ರಕರಣದ ಆರೋಪಿ ಸಾದಿಕ್ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಈ ಜಗಳ ವಿಕೋಪಕ್ಕೆ ತಿರುಗಿ ಕೈದಿಗಳು ಪರಸ್ಪರ ಹಲ್ಲೆ ನಡೆಸಿದ್ದಾರೆ.
ಜೈಲಿನ ಕಿಟಿಕಿಯ ಅಲ್ಯುಮೀನಿಯಂ ಫ್ರೇಮ್, ಟ್ಯೂಬ್ಲೈಟ್ ಮತ್ತು ಕಲ್ಲು, ಕೊಡ ಪಾನ, ಚೊಂಬುಗಳಿಂದ ಕೈದಿಗಳು ಹೊಡೆದಾಡಿ ಕೊಂಡಿದ್ದು, ಪೊಲೀಸರು ಲಾಠಿ ಪ್ರಹಾರ ಮಾಡಿ ಹೊಡೆದಾಟವನ್ನು ಹತೋಟಿಗೆ ತಂದರು. ಬಳಿಕ ಕೈದಿಗಳನ್ನು ಸೆಲ್ಗಳಲ್ಲಿ ಬಂಧಿಸಲಾಯಿತು.
ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಜೈಲರ್ಗಳು, ಜೈಲು ಸಿಬ್ಬಂದಿ ಮತ್ತು ಹೋಂಗಾರ್ಡ್ ಮೇಲೂ ವಿಚಾರಣಾಧೀನ ಕೈದಿಗಳು ಹಲ್ಲೆ ನಡೆಸಿದ್ದಲ್ಲದೆ ಸಾಂಬಾರು ಪುಡಿಯನ್ನು ಎರಚಿದ್ದಾರೆ ಎಂದು ತಿಳಿದು ಬಂದಿದೆ.ಗಲಭೆಯ ಮಾಹಿತಿ ಪಡೆದ ಬರ್ಕೆ ಠಾಣೆ ಪೊಲೀಸರು, ರಾಜ್ಯ ಮೀಸಲು ಪಡೆಯ ತುಕಡಿಗಳನ್ನು ಕರೆಸಿಕೊಂಡಿದ್ದರು . ಡಿಸಿಪಿ ಹನುಮಂತರಾಯ, ಇನ್ಸ್ಪೆಕ್ಟರ್ಗಳಾದ ರವೀಶ್ ನಾಯಕ್, ಸಿಸಿಬಿ ಇನ್ಸ್ಪೆಕ್ಟರ್ ಶಾಂತಾರಾಂ ಮತ್ತು ಇತರ ಅಧಿಕಾರಿಗಳು ಜೈಲಿಗೆ ದೌಡಾಯಿಸಿ ಪರಿಸ್ಥಿತಿ ಹತೋಟಿಗೆ ತಂದರು.