ಉಡುಪಿ, ನ.02(Daijiworld News/SS): ಫಾ. ಮಹೇಶ್ ಅವರ ಸಾವಿನ ನ್ಯಾಯಕ್ಕಾಗಿ ಒತ್ತಾಯಿಸಿ ಇಂದು ಸಂಜೆ ಶಿರ್ವಾ ಚರ್ಚ್ ಆವರಣದಲ್ಲಿ 1000ಕ್ಕೂ ಹೆಚ್ಚು ಕ್ರೈಸ್ತರಿಂದ ಬೃಹತ್ ಪ್ರತಿಭಟನೆ ನಡೆದಿದೆ.
ಫಾ. ಮಹೇಶ್ ಅವರ ಮರಣೋತ್ತರ ಮಾಸ ಪೂಜೆಯು ಚರ್ಚ್'ನಲ್ಲಿ ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿದ್ದರು. ಈ ವೇಳೆ ಫಾದರ್ ಅವರ ಶವ ಸಂಸ್ಕಾರ ಮಾಡಿದ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಇದ್ದಕ್ಕಿದ್ದಂತೆ ಚರ್ಚ್ ಆವರಣದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಜಮಾಯಿಸಿ ಸಾವಿನ ನ್ಯಾಯಕ್ಕಾಗಿ ಪ್ರತಿಭಟಿಸಿದ್ದಾರೆ. ಮಾತ್ರವಲ್ಲ, ಫಾ ಮಹೇಶ್ ಅವರ ಸಾವಿನ ರಹಸ್ಯ ಭೇದಿಸುವಲ್ಲಿ ಕಾಣುತ್ತಿರುವ ವಿಳಂಬವನ್ನು ಖಂಡಿಸಿದ್ದಾರೆ.
ತಿಂಗಳ ಹಿಂದೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಫಾ. ಮಹೇಶ್ ಅವರ ಸಾವಿನ ಹಿಂದಿನ ರಹಸ್ಯ ಬಹಿರಂಗ ಪಡಿಸುವಂತೆ ಇಗರ್ಜಿಯ ಅಧಿಕೃತರಲ್ಲಿ ಒತ್ತಾಯಿಸಿದ್ದಾರೆ. ಇದೇ ವೇಳೆ, ಈ ಆತ್ಮಹತ್ಯೆಯ ಹಿಂದೆ ಕೈವಾಡ ಇದೆ ಎಂದು ಸಂಶಯ ವ್ಯಕ್ತಪಡಿಸಿದ ಜನಸ್ತೋಮ ಚರ್ಚ್ ಆಡಳಿತ ಮಂಡಳಿ ಹಾಗೂ ಉಡುಪಿ ಧರ್ಮಕ್ಷೇತ್ರ ಯಾಕಾಗಿ ಸಮಗ್ರ ತನಿಖೆಗೆ ಪೋಲಿಸ್ ಇಲಾಖೆಯ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ಈಗಾಗಲೇ ಫಾ. ಮಹೇಶ್ ಸಾವಿನ ಹಿಂದೆ ಸ್ಥಳೀಯ ರಾಜಕೀಯ ಮುಖಂಡರೊಬ್ಬರ ಕೈವಾಡ ಇದೆಯೆಂಬ ವದಂತಿಯಿದ್ದು ಚರ್ಚ್ ಅಧಿಕೃತರು ಈ ಬಗ್ಗೆ ಯಾಕೆ ಪ್ರಕರಣ ದಾಖಲಿಸಿಲ್ಲ ಎಂದು ಚರ್ಚ್ ಅಧಿಕೃತರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತ್ರವಲ್ಲ, ಚರ್ಚ್ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾ ಪರೀಶೀಲನೆ ಮಾಡಿ ತನಿಖೆ ನಡೆಸಿದರೆ ಫಾ ಮಹೇಶ್ ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸತ್ಯ ಬಹಿರಂಗವಾಗಲಿದೆ ಎಂದಿದ್ದಾರೆ.
ಪ್ರತಿಭಟನಾಕಾರರನ್ನು ಸಮಾಧಾನ ಪಡಿಸಿದ ಚರ್ಚಿನ ಪ್ರಧಾನ ಧರ್ಮಗುರುಗಳಾದ ಫಾ ಡೆನಿಸ್ ಡೆಸಾ, ಫಾ. ಮಹೇಶ್ ಹೆತ್ತವರು ಹಾಗೂ ಕುಟುಂಬಸ್ಥರು ಪೊಲೀಸ್ ತನಿಖೆ ಬೇಡವೆಂದು ವಿನಂತಿ ಮಾಡಿದ್ದರಿಂದ ಹೆಚ್ಚಿನ ತನಿಖೆಗೆ ಪೊಲೀಸರನ್ನು ಒತ್ತಾಯಿಸಿಲ್ಲ ಎಂದು ಹೇಳಿದ್ದಾರೆ.
ಫಾ. ಮಹೇಶ್ ಹೆತ್ತವರಿಗೆ ಗುರುಗಳ ಆತ್ಮಹತ್ಯೆಯ ಹಿಂದೆ ಯಾವುದೇ ಸಂಶಯಗಳಿಲ್ಲ. ಆದುದರಿಂದ ಅವರ ಮಾತಿಗೆ ಬೆಲೆ ನೀಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಿಲ್ಲ. ಪೊಲೀಸರ ಅಂತಿಮ ವರದಿಗಾಗಿ ಚರ್ಚ್ ಆಡಳಿತ ಸಮಿತಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.
ಸದ್ಯ ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಗಿದ್ದು, ಉಡುಪಿ ಪೊಲೀಸ್ ಅಧೀಕ್ಷಕಾರಾದ ನಿಶಾ ಜೇಮ್ಸ್ ಘಟನೆಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.