ಮಂಗಳೂರು, ನ 02(Daijiworld News/MSP): ಭಾರತೀಯ ಜಲಗಡಿಯೊಳಗೆ ಅಕ್ರಮವಾಗಿ ಪ್ರವೇಶಿಸಿ ಮೀನುಗಾರಿಕೆ ನಡೆಸುತ್ತಿದ್ದ 15 ಮಂದಿ ಇರಾನ್ ಪ್ರಜೆಗಳನ್ನು ಬಂಧಿಸಿದ್ದಾರೆ.
ಇವರೆಲ್ಲರೂ ಅಗತ್ತಿ ಲಕ್ಷದ್ವೀಪದಿಂದ ಸುಮಾರು 165 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದು, ಭಾರತೀಯ ಜಲ ಸೀಮೆಯ ಒಳಗಡೆ ಇರಾನ್ ದೇಶದ ಅವಿಧಿ ಮತ್ತು ಇಶಾನ್ ಎಂಬ ಬೋಟ್ ಮೂಲಕ ಪ್ರವೇಶಿಸಿದ್ದರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಂಧಿತರನ್ನು ಅಬಬಕರ್ ಅನ್ಸಾರಿ ಮೀಯಾ, ಮೂಸಾ ದೆಹದಾನಿ, ಅಜಂ ಅನ್ಸಾರಿ, ಶಿದ್ ಬಾಚೂ, ಅಬ್ದುಲ್ ಮಜೀದ್, ಮಜೀದ್ ರೆಹಮಾನಿ ದಾವೂದ್, ಮಹಮ್ಮದ್ ಇಸಾಕ್, ಕರೀಂ ಬಕ್ಸ್ ದೂರ್ ಜಾದೆ, ಮಹಮ್ಮದ್ ಬಲೂಚ್, ಬಮನ್, ಅಬ್ದುಲ್ ಗನಿ ಬಾಪೂರ್, ನಸೀರ್ ಭದ್ರುಜ್, ಅನ್ವರ್ ಬಲೂಚು, ನಭೀ ಬಕ್ಷ, ಯೂಸೂಫ್ ಜಹಾನಿ ಎಂದು ಗುರುತಿಸಲಾಗಿದೆ.
ಅ.21ರಂದು ಭಾರತೀಯ ಕೋಸ್ಟ್ಗಾರ್ಡ್ನ ವಿಕ್ರಮ್ ನೌಕೆಯಲ್ಲಿ ಡೆಪ್ಯೂಟಿ ಕಮಾಂಡೆಂಟ್, ಬೋರ್ಡಿಂಗ್ ಆಫೀಸರ್ ಹಾಗೂ ಸೈಲರ್ಗಳು ಸೇರಿ ಭಾರತೀಯ ಜಲಸೀಮೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಅನುಮಾನಸ್ಪದವಾಗಿ ಸಂಚರಿಸುತ್ತಿದ್ದ ಈ ಮೀನುಗಾರಿಕೆ ಬೋಟುಗಳನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ಬೋಟ್ ನಲ್ಲಿ ಇದ್ದವರು ಸೂಚನೆಯನ್ನು ಪರಿಗಣಿಸದೆ ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ. ಇದರಿಂದ ಸಂಶಯಗೊಂಡು ತಡೆದು ನಿಲ್ಲಿಸಿ ದಾಖಲಾತಿ ಕೇಳಿದಾಗ ಯಾವುದೇ ದಾಖಲೆಗಳಿರಲಿಲ್ಲ ಮಾತ್ರವಲ್ಲದೆ ಬೇಜಬ್ದಾರಿಯಾಗಿ ವರ್ತಿಸಿದ್ದರು. ಹೀಗಾಗಿ ಬೋಟುಗಳನ್ನು ವಶಕ್ಕೆ ಪಡೆದು ನವ ಮಂಗಳೂರು ಬಂದರಿಗೆ ಟೋಯಿಂಗ್ ಮಾಡಿ ತರುತ್ತಿರುವಾಗ ಅವಿಧಿ ಹೆಸರಿನ ಬೋಟ್ ತಾಂತ್ರಿಕ ತೊಂದರೆಯಿಂದ ಲಕ್ಷದ್ವೀಪದ ಅಗಥಿ ಬಳಿ ಸಮುದ್ರದಲ್ಲಿ ಮುಳುಗಡೆಯಾಗಿದೆ.ಆ ಬಳಿಕ ಅದ ರಲ್ಲಿದ್ದ ಮೀನುಗಾರರನ್ನು ಇಶಾನ್ ಬೋಟಿನಲ್ಲಿ ನವಮಂಗಳೂರು ಬಂದರಿಗೆ ಕರೆತರಲಾಯಿತು.
ಈ ಬಗ್ಗೆ ಅ.31ರಂದು ಭಾರತೀಯ ತಟರಕ್ಷಣಾ ಪಡೆಯ ಡೆಪ್ಯೂಟಿ ಕಮಾಂಡೆಂಟ್, ಬೋರ್ಡಿಂಗ್ ಆಫೀಸರ್ ಕುಲದೀಪ್ ಶರ್ಮಾ ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಿದ್ದರು. ಭಾರತೀಯ ಜಲಸೀಮೆಯೊಳಕ್ಕೆ ಅಕ್ರಮವಾಗಿ ಪ್ರವೇಶಿಸಿ ಪರವಾನಿಗೆ ಇಲ್ಲದೆ ಮೀನುಗಾರಿಕೆಯಲ್ಲಿ ತೊಡಗಿದ್ದು ಮತ್ತು ನೌಕಾಪಡೆಯ ಅ ಧಿಕಾರಿಗಳ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದು ಮತ್ತು ಭಾರತೀಯ ಜಲಸಂಪತ್ತನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿ ಅಪರಾಧವೆಸಗಿದ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ನ್ಯಾಯಾಧೀಶರು ನ.14ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಮಂಗಳೂರು ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೂಪರಿಂಡೆಂಟ್ ಆಫ್ ಪೊಲೀಸ್ ಮಾರ್ಗದರ್ಶನದಲ್ಲಿ ಮಂಗಳೂರು ಡಿವೈಎಸ್ಪಿ ತನಿಖೆ ನಡೆಸುತ್ತಿದ್ದಾರೆ.