ಮಂಗಳೂರು, ನ 01 (Daijiworld News/MB): ವಿದ್ಯಾರ್ಥಿಗಳನ್ನು ಹಾಗೂ ಸಾರ್ವಜನಿಕರನ್ನು ಗುರಿಯಾಗಿಸಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಯುವಕರ ತಂಡವೊಂದನ್ನು ಮಂಗಳೂರು ಸಿಸಿಬಿ ಪೊಲೀಸರು ಹಾಗೂ ಇಕಾನಾಮಿಕ್ & ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಕಾರ್ ಸ್ಟ್ರೀಟ್ ನ ಕಿಶನ್ ಹೆಗ್ಡೆ (19), ಫಳ್ನೀರ್ ವಾಸ್ ಲೇನ್ ನ ಹಬೀಲ್ ಅಹಮ್ಮದ್(19), , ಕಾರ್ ಸ್ಟ್ರೀಟ್ ನ ಅನಂತ ಕುಡ್ವ(21), ಅತ್ತಾವರದ ಗೋಪಿನಾಥ ಭಂಡಾರ್ಕರ್(24) ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ನಗರದ ಮೋರ್ಗನ್ ಗೇಟ್ ಬಳಿ ವಶಕ್ಕೆ ಪಡೆಯಲಾಗಿದ್ದು, ಈ ವೇಳೆ 22 ಗ್ರಾಂ ಕೋಕೆನ್, 6 ಗ್ರಾಂ ಎಂಡಿಎಂಎ, 75 ಫಿಲ್ಸ್, 5 ಎಲ್ಎಸ್ ಡಿ, 10 ಗ್ರಾಂ ಚರಸ್ ಸೇರಿ ಒಟ್ಟಾರೆ 2,50,000 ಮೌಲ್ಯದ ನಿಷೇಧಿತ ಮಾದಕ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಇದಲ್ಲದೆ ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನ ಸೇರಿ ಒಟ್ಟು ರೂ. 3 ಲಕ್ಷ ಮೌಲ್ಯದ ಸುತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಇಕನಾಮಿಕ್ & ನಾರ್ಕೋಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾದಕ ವಸ್ತುವಿನ ಮಾರಾಟದ ಜಾಲದಲ್ಲಿ ಇನ್ನೂ ಇತರರು ಭಾಗಿಯಾಗಿದ್ದು, ಪ್ರಕರಣದಲ್ಲಿ ಹೆಚ್ಚಿನ ತನಿಖೆ ಮುಂದುವರಿದಿದೆ