ಮಂಗಳೂರು ಜ 08 : ತುಳು ಚಲನಚಿತ್ರ ನಿರ್ಮಾಪಕರ ಸಂಘದ ಪದಾಧಿಕಾರಿಗಳು ಮತ್ತು ನಿರ್ಮಾಪಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸರ್ಕ್ಯೂಟ್ ಹೌಸ್ ನಲ್ಲಿ ಜ.8 ರ ಸೋಮವಾರ ಭೇಟಿಯಾಗಿ ತುಳು ಸಿನಿಮಾರಂಗದಲ್ಲಿನ ಸಮಸ್ಯೆಯನ್ನು ನಿವಾರಿಸುವಂತೆ ಮನವಿ ಮಾಡಿದರು.
ಸೀಮಿತ ಮಾರುಕಟ್ಟೆಯಾದ ತುಳು ಚಿತ್ರರಂಗದಲ್ಲಿ ತಯಾರಾಗುತ್ತಿರುವ ಎಲ್ಲಾ ತುಳು ಸಿನಿಮಾಗಳಿಗೆ ಸಬ್ಸಿಡಿ ನೀಡುವಂತೆ ಮನವಿ ಮಾಡಲಾಯಿತು. ಅಲ್ಲದೆ ಜಿಲ್ಲೆಯಲ್ಲಿ ಚಿತ್ರಮಂದಿರಗಳ ಸಮಸ್ಯೆ ಇದೆ. ಚಿತ್ರಮಂದಿರಗಳ ನಿರ್ಮಾಣದ ಜತೆಗೆ ಕಲಾವಿದರಿಗೆ ನೀಡುವ ಮಾಸಾಶನವನ್ನು1,500 ರಿಂದ 5 ಸಾವಿರ ರೂ. ವರೆಗೆ ಏರಿಸಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.
ತುಳು ಚಲನ ಚಿತ್ರ ನಿರ್ಮಪಕರ ಸಂಘದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ ನೇತೃತ್ವದ ನಿಯೋಗ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು. ನಿಯೋಗದಲ್ಲಿ ನಿರ್ಮಾಪಕರಾದ ದೇವದಾಸ್ ಕಾಪಿಕಾಡ್, ಆರ್ ಧನರಾಜ್, ಸಚಿನ್ ಎ ಎಸ್ ಉಪ್ಪಿನಂಗಡಿ, ಸುದೇಶ್ ಭಂಡಾರಿ, ಗಂಗಾಧರ ಶೆಟ್ಟಿ, ಶರ್ಮಿಳಾ ಕಾಪಿಕಾಡ್, ಪ್ರೀತಂ, ಉದಯಾ ಮೊದಲಾದವರು ಉಪಸ್ಥಿತರಿದ್ದರು.