ಮಂಗಳೂರು, ಅ 31 (Daijiworld News/MSP): ಕುದುರೆ ವ್ಯಾಪಾರದ ಮೂಲಕ ಶಾಸಕರನ್ನು ಖರೀದಿಸಿದ ಬಿಜೆಪಿಯ ಪರಿಸ್ಥಿತಿ ದಯನೀಯವಾಗಿದ್ದು ಇದೀಗ ಕಾರ್ಪೋರೇಟರ್ ಅಭ್ಯರ್ಥಿಗಳನ್ನು ಕೂಡಾ ಖರೀದಿಸುವ ಪರಿಸ್ಥಿತಿ ಬಂದಿದೆ ಎಂದು ಶಾಸಕ ಮತ್ತು ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ವ್ಯಂಗ್ಯವಾಡಿದ್ದಾರೆ.
ಅವರು ನಗರದಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ, ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಆಶಾ ಡಿಸಿಲ್ವ ದಿಡೀರ್ ಬೆಳವಣಿಗೆಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಪಳ್ನೀರ್ ವಾರ್ಡ್ ನಿಂದ ಕಣಕ್ಕಿಳಿದ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಎಂಸಿಸಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸಮರ್ಥ ಅಭ್ಯರ್ಥಿಗಳ ಕೊರತೆ ಎದುರಿಸುತ್ತಿದೆ. ಇದೇ ಕಾರಣಕ್ಕೆ ಕಾರ್ಪೊರೇಟರ್ಗಳನ್ನು ಮತ್ತು ಉತ್ತಮ ಅಭ್ಯರ್ಥಿಗಳನ್ನು ಕಾಂಗ್ರೆಸ್ನಿಂದ ಬಿಜೆಪಿ ಖರೀದಿಸುತ್ತಿದೆ. ಈ ಹಿಂದೆ ಶಾಸಕರನ್ನು ಖರೀದಿಸುತ್ತಿದ್ದರು. ಆದರೆ ಈಗ ಕರ್ಪೊರೇಟರ್ಗಳನ್ನು ಖರೀದಿಸುವ ದಯಾನೀಯ ಪರಿಸ್ಥಿತಿಗೆ ಬಿಜೆಪಿ ತಲುಪಿದೆ. ಬಿಜೆಪಿಯಲ್ಲಿ ನಾಯಕರು ಮತ್ತು ಅಭ್ಯರ್ಥಿಗಳ ಕೊರತೆ ಇದ್ದು ಈ ಘಟನೆ ಅವರ ಯಾವ ಮಟ್ಟದಲ್ಲಿ ಇದ್ದಾರೆ ಎನ್ನುವುದನ್ನು ತೋರಿಸುತ್ತದೆ. ಇದು ಆ ಪಕ್ಷದ ದುರಂತ ಎಂದು ಕುಟುಕಿದರು.
ಇದೇ ವೇಳೆ ಮಾಜಿ ಶಾಸಕ ಮೊಹಿಯುದ್ದೀನ್ ಬಾವಾ ಅವರ ಮೇಲೆ ಲಂಚದ ಆರೋಪವನ್ನು ಅವರು ನಿರಾಕರಿಸಿದರು. ಮಾಜಿ ಶಾಸಕರ ಮೇಲಿನ ಆರೋಪಗಳು ಆಧಾರರಹಿತವಾಗಿವೆ. ಪಾಲಿಕೆ ಚುನಾವಣೆಗೆ ಟಿಕೆಟ್ಗಾಗಿ ಹತ್ತು ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂಬ ಕೆಲವರ ಹೇಳಿಕೆಯು ಕಪೋಲಕಲ್ಪಿತ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ಘೋಷಣೆಯ ವೇಳೆ, ಮಾಜಿ ಶಾಸಕ ಬಾವಾ ಮೇಲೆ ಹಲ್ಲೆ ನಡೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವಾಗ ಚಿಕ್ಕ ಪುಟ್ಟ ಮನಸ್ತಾಪಗಳು ಸಹಜ. ಅರ್ಹರಿಗೆ ನಾವು ಟಿಕೆಟ್ ನೀಡಿದ್ದೇವೆ. ಟಿಕೆಟ್ ವಂಚಿತರೂ ಕೂಡಾ ಅರ್ಹರಿದ್ದಾರೆ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನ ಮಾನ ನೀಡಬಹುದು. ಟಿಕೆಟ್ ವಂಚಿತರಿಂದ ಭಿನ್ನಮತ ಸಹಜ ಮತ್ತು ಪಕ್ಷದ ಅಂತರಿಕ ವಿಷಯವಾಗಿದೆ. ಆದರೆ ಚುನಾವಣೆಯನ್ನು ಎದುರಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಲಿದ್ದೇವೆ ಎಂದರು.