ಮೈಸೂರು, ಜ 8: ದೀಪಕ್ ರಾವ್ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೋರೇಟರ್ ಹಸ್ತಕ್ಷೇಪ ಇದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೀಪಕ್ ರಾವ್ ಮೇಲೆ ಹಲ್ಲೆ ನಡೆಸಿದ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ದೀಪಕ್ ರಾವ್ ಕೊಲೆಯ ಮೂಲ ವ್ಯಕ್ತಿಗಳು ಯಾರೆಂಬುದನ್ನು ಇನ್ನು ಬಹಿರಂಗೊಳಿಸಿಲ್ಲ. ಕೊಲೆ ನಡೆದು ಇಷ್ಟು ದಿನಗಳು ಕಳೆದ್ರೂ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಆ ನಾಲ್ಕು ಜನಕ್ಕೆ ಸುಪಾರಿ ಕೊಟ್ಟವರು ಯಾರು ಎಂಬುವುದನ್ನು ಸರ್ಕಾರಕ್ಕೆ ಇನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದು, ಇದೂವರೆಗೂ ಸತ್ಯಾಂಶವನ್ನು ತಿಳಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದರೂ, ಸರ್ಕಾರ ಮಾತ್ರ ಮೌನವಹಿಸಿರುವುದು ಯಾಕೆ ಅಂತಾ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೀಪಕ್ ರಾವ್ ಕೊಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಭಾಗಿಯಾಗಿದ್ದಾರೆ. ದೀಪಕ್ ಪ್ರಕರಣದ ಕುರಿತು ಕೆಲವು ಮಾಹಿತಿಗಳು ನನ್ನ ಬಳಿ ಇದೆ. ದೊರೆತಿರುವ ಎಲ್ಲಾ ಮಾಹಿತಿಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ಇದೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.