ಮಂಗಳೂರು, ಜ 08: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸ್ತುತ ಪರಿಸ್ಥಿತಿ ಕುರಿತು ಜಲೀಲ್ ಮುಕ್ರಿ ಬರೆದ ಕವಿತೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆಗೆ ಕಾರಣವಾಗಿದೆ. ಜಲೀಲ್ ಮುಕ್ರಿ ಪ್ರಸ್ತುತ ಸೌದಿ ಅರೇಬಿಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ರಜೆಯಲ್ಲಿ ಬಂದು ತಮ್ಮ ತವರು ಉಪ್ಪಿನಂಗಡಿಯಲ್ಲಿ ನೆಲೆಸಿರುವ ಅವರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಬೆಳವಣಿಗೆಗೆ ಬಗ್ಗೆ ಕವಿತೆಯ ಮೂಲಕ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಕವಿತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಜಲೀಲ್ ಮುಕ್ರಿ
ಆ ಕವಿತೆಯ ಸಾಲುಗಳು ಹೀಗಿವೆ
ಸಹಕರಿಸಿ
ಚುಣಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ..
ಮಾನವ ಹೆಣ ಕಂಡಿತಾ ಬೇಡ
ಹಿಂದೂ ಮುಸ್ಲಿಮ್ ಕ್ರಿಶ್ಚನರ
ಹೆಣ ಬೇಕಾಗಿದೆ...
ಅರಮನೆ ಕಟ್ಟಿಕೊಂಡಿದ್ದೇನೆ
ಮಕ್ಕಳು ಮರಿ
ಮಕ್ಕಳಿಗಾಗುವಷ್ಟು ಕೂಡಿಟ್ಟಿದ್ದೇನೆ
ಮಾನವ ಸಹಜ ಆಶೆ ನನ್ನಲ್ಲಿ ಇನ್ನೂ ಇದೆ ಇನ್ನೂ ಕೂಡಿಡಬೇಕಾಗಿದೆ..
ಸಹಕರಿಸಿ ಹೆಣವೊಂದು ಬೇಕಾಗಿದೆ...
ಹಿಂದೂ ಮುಸ್ಲಿಮ್
ಅನ್ನು ಕೊಂದ
ಮುಸ್ಲಿಮ್ ಹಿಂದೂವನ್ನು ಕೊಂದ
ಹೆಣ ಬೇಕಾಗಿದೆ
ಸ್ವಧರ್ಮದವರೇ ಕೊಂದ
ಅತ್ಯಾಚಾರ ಮಾಡಿದ ಹೆಣ ಕಂಡಿತಾ ಬೇಡ
ಸಹಕರಿಸಿ
ಚುಣಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ...
ಬಡವರಿಗೆ ಉಣ್ಣಿಸಲಿಲ್ಲ
ದರಿದ್ರರಿಗೆ ಸೂರಿಲ್ಲ
ಲಂಚ ಭೃಷ್ಟಾಚಾರ ನಿಲ್ಲಿಸಲಾಗಲಿಲ್ಲ
ಸುಳ್ಳು ಭರವಸೆ ಪೂರೈಸಲಿಲ್ಲ
ಮತಗಿಟ್ಟಿಸಲು ಬೇರೆ ದಾರಿಯಿಲ್ಲ
ಹೆಣವೊಂದು ಬೇಕಾಗಿದೆ...
ಪೂಜಾರಿ, ಬಾಳಿಗ, ಅಶ್ರಫ್,
ದಾನಮ್ಮ, ಶರತ್ ,ದೀಪಕ್ರ ಹೆಣದಲ್ಲಿ
ಒಂದಿಷ್ಟು ಮತ ಸಿಕ್ಕೀತು
ಆದರೂ ಗೆಲ್ಲಲು ಇನ್ನೊಂದಿಷ್ಟು
ಹೆಣಗಳು ಬೇಕಾಗಿದೆ....
ಪಕ್ಷ ಪಕ್ಷಗಳ
ಪೈಪೋಟಿಯ ಮಾರುಕಟ್ಟೆಯಲ್ಲಿ
ಹೆಣಗಳು ಹರಾಜಾಗುತ್ತಿವೆ
ಬಿಕರಿಯಾಗುತ್ತಿದೆ
ಕೊಂದವರು,
ಸತ್ತವರು
ಸಾರಾಸಗಟು ಹರಾಜಾಗುತ್ತಿದ್ದಾರೆ
ಸಹಕರಿಸಿ
ಚುನಾವಣೆ ಬಂದಿದೆ
ಹೆಣವೊಂದು ಬೇಕಾಗಿದೆ
ಮಾನವ ಹೆಣ ಕಂಡಿತಾ ಬೇಡ
ಹಿಂದೂ ಮುಸ್ಲಿಮ್ ಕ್ರಿಶ್ಚನ್
ಹೆಣ ಬೇಕಾಗಿದೆ
ಸಹಕರಿಸಿ ಪ್ಲೀಸ್ ನಮ್ಮ ನಾಡ ಕಾಪಾಡಿ..
ಜಲೀಲ್ ಮುಕ್ರಿ