ಕುಂದಾಪುರ, ಅ 30 (Daijiworld News/MSP): ಕಾರವಾರ - ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ನಿರ್ಮಾಣದಲ್ಲಿ ಐಆರ್ಬಿ ಕಂಪೆನಿಯು ತಾನು ನೀಡಿದ ಭರವಸೆಗಳನ್ನು ಮರೆತಿದ್ದು, ಭರವಸೆಗಳನ್ನು ಪುರ್ಣಗೊಳಿಸದೆ ಟೋಲ್ ಸಂಗ್ರಹಕ್ಕೆ ಮುಂದಾದರೆ ಇನ್ನಷ್ಟು ಉಗ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಎಚ್ಚರಿಸಿದ್ದಾರೆ. ಅವರು ಬುಧವಾರ ಶಿರೂರು ಟೋಲ್ ಗೇಟ್ ಬಳಿ ನಡೆದ ಟೋಲ್ ಚಲೋ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಚತುಷ್ಪಥ ನಿರ್ಮಾಣ ಸಂದರ್ಭ ಸರ್ವಿಸ್ ರಸ್ತೆಗಳನ್ನು ಸಂಪೂರ್ಣಗೊಳಿಸಬೇಕು. ಶಿರೂರಿನಲ್ಲಿ ನಿರ್ಮಾಣಗೊಂಡ ಟೋಲ್ಗೇಟಿನಲ್ಲಿ ಸ್ಥಳೀಯ ವಾಹನ ಪ್ರಯಾಣಿಕರಿಗೆ ಸುಂಕದಲ್ಲಿ ರಿಯಾಯಿತಿ ನೀಡಬೇಕು ಎಂಬುದನ್ನು ಗಾಳಿಗೆ ತೂರಿ ಐಆರ್ಬಿ ಕಂಪೆನಿ ಹೆದ್ದಾರಿ ಕಾಮಗಾರಿಯ ನಿಯಮಗಳನ್ನು ಪೂರ್ಣಗೊಳಿಸದೇ ಟೋಲ್ ಸಂಗ್ರಹಕ್ಕೆ ಮುಂದಾಗಿದೆ. ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗಿದ್ದು, ಇದು ಪ್ರಾಥಮಿಕ ಹೆಜ್ಜೆ. ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಮುಮದಿನ ದಿನಗಳಲ್ಲಿ ತಲ್ಲೂರಿನಿಂದ ಶಿರೂರಿನ ತನಕ ಪಾದಯಾತ್ರೆಯ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕ ಸುಕುಮಾರ ಶೆಟ್ಟಿ, ಜನಹಿತಕ್ಕೋಸ್ಕರ ನಿರ್ಮಾಣವಾಗುವ ಯಾವುದೇ ಕಾಮಗಾರಿಯಲ್ಲಿ ನ್ಯೂನ್ಯತೆಗಳಾದರೆ ಅದರ ವಿರುದ್ಧ ಪಕ್ಷಾತೀತವಚಾಗಿ ಹೋರಾಟ ಮಾಡುತ್ತೇನೆ. ಒಪ್ಪಂದದಂತೆ ಚತುಷ್ಪಥ ಕಾಮಗಾರಿಯು ಶೇ. ೭೫ ಭಾಗ ಮುಗಿದ ಬಳಿಕವೇ ಟೋಲ್ ಸಂಗ್ರಹ ಮಾಡಬೇಕು. ಆದರೆ ಇಲ್ಲಿ ಸರ್ವೀಸ್ ರಸ್ತೆಗಳು ನಿರ್ಮಾಣವಾಗಿಲ್ಲ. ಸಂಪರ್ಕ ರಸ್ತೆ ನಿರ್ಮಿಸಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಸಾರಿಗೆ ಸಚಿವರ ಗಮನಕ್ಕೆ ತಂದು ಸಮಸ್ಯೆ ಪರಿಹಾರಕ್ಕೆ ಯತ್ನಿಸಲಾಗುವುದು. ಜನಹಿತ ಕಾಪಾಡುವಲ್ಲಿ ನಾನು ಸದಾ ಇಲ್ಲಿನ ಜನರ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು.
ಪ್ರತಿಭಟನೆ ಕಾರ್ಯಕ್ರಮದಲ್ಲಿ ರಾಜು ಪೂಜಾರಿ, ದೀಪಕ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ, ಉಮೇಶ್ ಶೆಟ್ಟಿ ಕಲ್ಗದ್ದೆ, ಪುಷ್ಪರಾಜ್ ಶೆಟ್ಟಿ. ಪ್ರಿಯಾ ಕಮಲೇಶ್ ಬಿಜೂರ್, ಅರುಣ್ ಕುಮಾರ್, ಸುರೇಶ್ ಬಟವಾಡಿ ಸೇರಿದಂತೆ ನೂರಾರು ಪ್ರತಿಭಟನಾಕಾರರು ಸೇರಿದ್ದರು. ಬಳಿಕ ಕಾಮಗಾರಿಯ ಸೈಟ್ ಇಂಜಿನಿಯರ್ ನವೀನ್ ಅವರಿಗೆ ಮನವಿ ಸಲ್ಲಿಸಲಾಯಿತು.