ಮಂಗಳೂರು, ಅ 30 (Daijiworld News/MSP): ಕುವೈಟ್ನಲ್ಲಿ ಚಾಲಕ ಕೆಲಸಕ್ಕಾಗಿ ತೆರಳಿ, ಅಲ್ಲಿ ಕಿರುಕುಳಕ್ಕೊಳಗಾಗಿ ಜೀತದಾಳುವಿನಂತೆ ಬದುಕಿತ್ತಿದ್ದ ತೊಕ್ಕೊಟ್ಟಿನ ಯುವಕ ನೆಲ್ಸನ್ ಡಿ’ಸೋಜಾ ಅವರನ್ನು ಅಲ್ಲಿನ ಕನ್ನಡಿಗರ ನೆರವಿನೊಂದಿಗೆ ರಕ್ಷಿಸಿ ಸ್ವದೇಶಕ್ಕೆ ಕಳುಹಿಸಲಾಗಿದೆ.
ತೊಕ್ಕೊಟ್ಟಿನಲ್ಲಿ ಆಟೋರಿಕ್ಷಾ ಚಾಲಕರಾಗಿದ್ದ ನೆಲ್ಸನ್ ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ಏಜೆಂಟ್ ಮೂಲಕ ವೀಸಾ ಪಡೆದು ಕಳೆದ ವರ್ಷ ಆಗಸ್ಟ್ನಲ್ಲಿ ಕುವೈಟ್ಗೆ ತೆರಳಿದ್ದರು. ಆದರೆ,ಅವರಿಗೆ ಮನೆಕೆಲಸ ನೀಡಲಾಗಿತ್ತು, ಮಾತ್ರವಲ್ಲ ಅಲ್ಲಿನ ಪರಿಸ್ಥಿತಿ ನೆಲ್ಸನ್ ಅಂದುಕೊಂಡಂತಿರಲಿಲ್ಲ. ಪಾಸ್ಪೋರ್ಟ್ ಕಸಿದುಕೊಂಡು,ವೇತನ ನೀಡದೆ ಆಹಾರವನ್ನು ಮಾತ್ರ ನೀಡಲಾಗುತ್ತಿತ್ತು. ಕೆಲವು ದಿನಗಳ ಬಳಿಕ ಸೌದಿಯ ಗಡಿಪ್ರದೇಶವೊಂದರ ಮರುಭೂಮಿ ಪ್ರದೇಶವಾದ ವಫ್ರಾದಲ್ಲಿ ಮನೆಯಲ್ಲಿರಿಸಿ ಮಾನಸಿಕವಾಗಿ ಕಿರುಕುಳ ನೀಡಲಾಗಿತ್ತು. ಈ ಮಧ್ಯೆ ನೆಲ್ಸನ್ ಅವರು ಕುವೈಟ್ನಲ್ಲಿದ್ದ ತನ್ನ ಗೆಳೆಯ ದೀಪೇಶ್ಗೆ ಕರೆ ಮಾಡಿ ಸಹಾಯ ಯಾಚಿಸಿದ್ದರು. ಅಲ್ಲಿಗೆ ತಲುಪಲು ದೀಪೇಶ್ ಗೆ ಸಾಧ್ಯವಾಗಿರಲ್ಲಿಲ್ಲ. ಬಳಿಕ ನೆಲ್ಸನ್ ಆ ಮನೆಯಿಂದ ತಪ್ಪಿಸಿಕೊಂಡು ಹೊರಬಂದು ದೀಪೆಶ್ ಅವರನ್ನು ಭೇಟಿ ಮಾಡಿದ್ದರು. ದೀಪೆಶ್ ಸಹಾಯದಿಂದ ಜೇಮ್ಸ್ ಪೌಲ್ ಹಾಗೂ ಮೋಹನದಾಸ್ ಕಾಮತ್ ಅವರನ್ನು ಭೇಟಿಯಾಗಿದ್ದರು.
"ಇವರಿಬ್ಬರು ನೆಲ್ಸನ್ ಗೆ ಸಹಾಯ ಹಸ್ತ ಚಾಚಿದ್ದು ಕುವೈಟ್ನ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತಾತ್ಕಾಲಿಕ ದಾಖಲೆಗಳನ್ನು ದೊರಕಿಸಿಕೊಟ್ಟಿದ್ದು ಎರಡು ಮೂರು ದಿನಗಳಲ್ಲಿ ನೆಲ್ಸನ್ ಅವರನ್ನು ಊರಿಗೆ ಕಳುಹಿಸುವುದಕ್ಕೆ ಕಾನೂನು ಪ್ರಕಾರ ವ್ಯವಸ್ಥೆ ಮಾಡಲಾಗುತ್ತಿದೆ".
ಕುವೈತ್'ನಲ್ಲಿ ಜೀತದಾಳುವಿನಂತೆ ಬದುಕುತ್ತಿರುವ ಯುವಕ ನೆಲ್ಸನ್ ಡಿ’ಸೋಜಾಗೆ ಬೇಕಿದೆ ಮುಕ್ತಿ