ಹುಬ್ಬಳ್ಳಿ ಜ 08 : ಯುವಕನನ್ನೊಬ್ಬನನ್ನು ಬದುಕಿದ್ದಾಗಲೇ ಆತ ಸಾವನಪ್ಪಿದ್ದಾನೆ ಎಂದು ಘೋಷಿಸಿ ಸುಮಾರು 7 ಗಂಟೆಗಳ ಕಾಲ ಶವಾಗಾರದಲ್ಲಿಟ್ಟ ಘಟನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಹುಬ್ಬಳ್ಳಿಯ ಆನಂದ ನಗರ ನಿವಾಸಿ ಪ್ರವೀಣ್ (23) ಜ 7 ರ ಭಾನುವಾರ ಕಾರು ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳು ಪ್ರವೀಣ್ನನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾತ್ರಿ 8 ಗಂಟೆಗೆ ದಾಖಲಿಸಲಾಗಿತ್ತು. ಆದರೆ ಕಿಮ್ಸ್ ವೈದ್ಯರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪ್ರವೀಣ್ ಸಾವನ್ನಪ್ಪಿರುವುದಾಗಿ ಹೇಳಿ, ಶವವನ್ನು ಶವಾಗಾರದಲ್ಲಿ ಇರಿಸಿದ್ದಾರೆ. ಆದರೆ ಇಂದು ಬೆಳಗ್ಗೆ 10 ಘಂಟೆಯ ಸುಮಾರಿಗೆ ಮರಣೋತ್ತರ ಪರೀಕ್ಷೆ ನಡೆಸುವಾಗ ಪ್ರವೀಣ್ ಬದುಕಿರುವುದು ಬೆಳಕಿಗೆ ಬಂದಿದೆ. ತಕ್ಷಣ ಖಾಸಗಿ ಆಸ್ಪತ್ರೆ ಸಾಗಿಸಲಾಯಿತು. ಆದರೆ ಖಾಸಗಿ ಆಸ್ಪತ್ರೆಯ ವೈದ್ಯರು ಪರಿಶೀಲಿಸಿ 20 ನಿಮಿಷಗಳ ಹಿಂದೆ ಪ್ರವೀಣ್ ಮೃತಪಟ್ಟಿರುವುದಾಗಿ ಮಾಹಿತಿ ನೀಡಿದರು ಎಂದು ಸಂಬಂಧಿಕರರು ಹೇಳಿದ್ದಾರೆ. ಇದೀಗ ಸಂಬಂಧಿಕರು ಕಿಮ್ಸ್ ಆಸ್ಪತ್ರೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದಾರೆ.