ಕಾಸರಗೋಡು, ಅ 29 (DaijiworldNews/SM): ಗಡಿನಾಡ ಕಾಸರಗೋಡಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ತಿಳಿಯದ ಶಿಕ್ಷಕರನ್ನು ಮತ್ತೆ ನೇಮಿಸುವ ಮೂಲಕ ಕನ್ನಡಿಗರ ಸಾಂವಿಧಾನಿಕ ಹಕ್ಕನ್ನು ಕಸಿಯುವ ಹುನ್ನಾರಕ್ಕೆ ಕೇರಳ ಸರಕಾರ ಮುಂದಾಗಿದೆ. ಈ ಹಿಂದೆ ಮಂಗಲ್ಪಾಡಿ , ಬೇಕೂರು , ಪೈವಳಿಕೆ , ಪೆರಡಾಲ , ಬಂದಡ್ಕ , ಬೇಕಲ ಬಳಿಕ ಇದೀಗ ಮಂಜೇಶ್ವರ ದ ಮೂಡಂಬೈಲ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಕನ್ನಡೇತರ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು, ಕನ್ನಡಿಗರು ಆಕ್ರೋಶಗೊಂಡಿದ್ದರು.. ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಕನ್ನಡಿಗರ ತಾಳ್ಮೆ ಪರೀಕ್ಷಿಸಲು ಕೇರಳ ಸರಕಾರ ಮುಂದಾಗಿದೆ. ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡೇತರ ಶಿಕ್ಷಕರ ನೇಮಕದಿಂದ ವಿದ್ಯಾರ್ಥಿಗಳ ಭವಿಷ್ಯ ಏನೆಂಬುದು ಪ್ರಶ್ನಿಸಬೇಕಿದೆ.
ತಿರುವನಂತಪುರ ಮೂಲದ ಕನ್ನಡ ಅರಿಯದ ಶಿಕ್ಷಕರೋರ್ವರನ್ನು ಮೂಡಂಬೈಲು ಸರಕಾರಿ ಕನ್ನಡ ಮಾಧ್ಯಮ ಶಾಲೆಗೆ ನೇಮಿಸಿ ಕೇರಳ ಲೋಕಸೇವಾ ಆಯೋಗ ಆದೇಶ ನೀಡಿದೆ. ಆ ಮೂಲಕ ಕನ್ನಡ ಮತ್ತು ಕನ್ನಡಿಗರ ಭಾವನೆಗಳನ್ನು ಹತ್ತಿಕ್ಕುವ ಕೆಲಸವನ್ನು ಕೇರಳ ಸರಕಾರ ಮುಂದುವರಿಸಿದೆ. ತಿರುವನಂತಪುರ ಮೂಲದ ಈ ಶಿಕ್ಷಕರು ತನಗೆ ಕನ್ನಡ ತಿಳಿದಿದೆ ಎಂದು ಸುಳ್ಳು ಅಫಿದವಿತ್ ಅನ್ನು ಲೋಕಸೇವಾ ಆಯೋಗಕ್ಕೆ ಸಲ್ಲಿಸಿ ನೇಮಕಾತಿ ಆದೇಶ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಮಲಯಾಳ ಶಿಕ್ಷಕರ ನೇಮಕ ವಿರುದ್ಧ ಶಾಲಾ ವಿದ್ಯಾರ್ಥಿಗಳು, ಪೋಷಕರು ಪ್ರತಿಭಟನೆ ಆರಂಭಿಸಿದ್ದಾರೆ. ಯಾವುದೇ ಕಾರಣಕ್ಕೂ ಕನ್ನಡೇತರ ಶಿಕ್ಷಕರ ನೇಮಕಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಎಚ್ಚರಿಕೆಯನ್ನು ಕೂಡ ಸರಕಾರಕ್ಕೆ ನೀಡಿದ್ದಾರೆ. ಕನ್ನಡ ಹೋರಾಟ ಸಮಿತಿ, ಸ್ಥಳೀಯ ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಮುಖಂಡರು ಕನ್ನಡಿಗರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ನಾವು ಆರಂಭದಿಂದಲೂ ಕನ್ನಡ ಮಾಧ್ಯಮದಲ್ಲೇ ಓದಿದವರು. ನಮ್ಮ ಆಡು ಭಾಷೆಯೂ ಕೂಡ ಕನ್ನಡವೇ ಆಗಿದೆ. ಆದರೆ, ಕನ್ನಡ ತಿಳಿಯದ ಶಿಕ್ಷಕರು ಬಂದು ಪಠ್ಯ ಚಟುವಟಿಕೆ ನಡೆಸಿದ್ದಲ್ಲಿ ನಮಗೆ ಏನು ಅರ್ಥವಾಗುತ್ತದೆ? ಪರೀಕ್ಷೆಯಲ್ಲಿ ಏನೆಂದು ಉತ್ತರಿಸಬೇಕೆನ್ನುವುದು ವಿದ್ಯಾರ್ಥಿಗಳ ಪ್ರಶ್ನೆಯಾಗಿದೆ.
ಮತ್ತೊಂದೆಡೆ ಕನ್ನಡ ತಿಳಿಯದ ಶಿಕ್ಷಕರಿಗೆ ಯಾವುದೇ ಕಾರಣಕ್ಕೂ ಶಾಲೆಗೆ ಬರಲು ಬಿಡುವುದಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ. ನಮ್ಮ ಹೋರಾಟ ಏನಿದ್ದರು, ಕನ್ನಡ ತಿಳಿದೇ ಇರುವ ಶಿಕ್ಷಕರನ್ನು ಕನ್ನಡ ಶಾಲೆಗೆ ನೇಮಕ ಮಾಡುವವರ ವಿರುದ್ಧ. ಮಲಯಾಳಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ನಮಗೆ ಮಲಯಾಳ ಅಗತ್ಯವಾಗಿ ಬೇಕಾಗಿದೆ. ಆದರೆ, ಕನ್ನಡಿಗ ಮಕ್ಕಳಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ ಎಂಬು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ಈ ಹಿಂದೆ ಆರು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡೇತರ ಶಿಕ್ಷಕರ ನೇಮಕವಾದ ಸಂದರ್ಭ ಇದರ ವಿರುದ್ಧ ಉಗ್ರ ಪ್ರತಿಭಟನೆ ನಡೆದ ಹಿನ್ನಲೆಯಲ್ಲಿ ಅವರ ನೇಮಕ ರದ್ದುಗೊಳಿಸಲಾಗಿತ್ತು. ಆದರೂ ಸರಕಾರ ಮತ್ತೆ ಮತ್ತೆ ಕನ್ನಡಿಗರ ತಾಳ್ಮೆ ಪರೀಕ್ಷಿಸುವಂತಿದೆ. ಇದೀಗ ಮೂಡಂಬೈಲ್ ಶಾಲೆಗೆ ಭೌತ ಶಾಸ್ತ್ರಕ್ಕೆ ಮಾತ್ರವಲ್ಲ ಗಣಿತ ಪಠ್ಯಕ್ಕೂ ಕನ್ನಡ ತಿಳಿಯದ ಶಿಕ್ಷಕರ ನೇಮಕ ಆಗಿದೆ ಎಂಬ ಮಾಹಿತಿ ಕೂಡಾ ಲಭ್ಯವಾಗಿದೆ. ಇದು ಮಾತ್ರವಲ್ಲ, ಗಡಿನಾಡಿನ ಇನ್ನಷ್ಟು ಕನ್ನಡ ಶಾಲೆಗಳಿಗೆ ಕನ್ನಡೇತರ ಶಿಕ್ಷಕರ ನೇಮಕಕ್ಕೂ ಹುನ್ನಾರ ನಡೆಯುತ್ತಿದೆ. ಗಡಿನಾಡಿನ ಕನ್ನಡಿಗರ ಸವಲತ್ತು, ಸಾಂವಿಧಾನಿಕ ಹಕ್ಕುಗಳನ್ನು ಕಸಿಯುವ ಎಲ್ಲಾ ರೀತಿಯ ಪ್ರಯತ್ನ ಇಲ್ಲಿ ನಡೆಸಲಾಗುತ್ತಿದೆ ಎನ್ನುವ ಆರೋಪ ಹೆಚ್ಚುತ್ತಿದೆ.
ಮಲಯಾಳಿ ಶಿಕ್ಷಕರ ನೇಮಕದ ವಿರುದ್ಧ ಕನ್ನಡಿಗರು ಉಗ್ರ ಹೋರಾಟಕ್ಕೆ ಇಳಿಯುವ ಮುನ್ನ ಕೇರಳ ಸರಕಾರ ತನ್ನ ನಿಲುವನ್ನು ಬದಲಾಯಿಸುವ ಅಗತ್ಯವಿದ್ದು, ಕನ್ನಡ ಮಾಧ್ಯಮ ಶಾಲೆಗೆ ಕನ್ನಡದ ಅರಿವುಳ್ಳ ಶಿಕ್ಷಕರನ್ನೇ ನೇಮಿಸುವ ಅಗತ್ಯತೆ ಇದೆ.