ಕುಂದಾಪುರ, ಅ 29 (DaijiworldNews/SM): ಕೃಷಿಯಲ್ಲಿ ಆಸಕ್ತಿ ಇರಬೇಕು. ಕೃಷಿಕ ನಿರಂತರ ಕೃಷಿ ಪ್ರೇಮ ಯಶಸ್ಸಿನತ್ತ ಕೊಂಡೋಯ್ಯಬಹುದು. ವೃತ್ತಿ ಬೇರೆ ಇದ್ದರೂ ಕೂಡಾ ಪ್ರವೃತ್ತಿಯಾಗಿ ಕೃಷಿಯನ್ನು ಅನುಸರಿಸಿದರೆ ಮನಸಿಗೂ, ಜೇಬಿಗೂ ಖುಷಿ. ಎಕರೆಗಟ್ಟಲೆ ಜಮೀನು ಇದ್ದೂ ಹಡಿಲು ಬಿಡುವ ಉದಾಸೀನವಾದಿಗಳ ನಡುವೆ, ಇರುವ ಅಂಗೈ ಅಗಲದ ಫಲವತ್ತಲ್ಲದ ಭೂಮಿಯಲ್ಲೂ ಕೃಷಿಯ ಕನಸನ್ನು ಬಿತ್ತಿ ಯಶಸ್ಸು ಕಂಡ ಆನೇಕ ಸಾಧಕರು ಇದ್ದಾರೆ. ಅಂತಹ ಯುವ ಕೃಷಿಕರಲ್ಲಿ ಕಾವ್ರಾಡಿ ಗ್ರಾಮದ ಮುಂಬಾರು ದಿನಕರ ಶೆಟ್ಟರು ಒಬ್ಬರು.
ದಿನಕರ ಶೆಟ್ಟಿ ಎನ್ನುವ ಯುವ ಕೃಷಿಕ ಅಂಗೈಯಗಲದ ಗುಡ್ಡ ಪ್ರದೇಶದಲ್ಲಿ ಇವತ್ತು ಮಾದರಿ ಅಡಿಕೆ ಕೃಷಿ ಮಾಡಿದ್ದಾರೆ. ಕೇವಲ 50 ಸೆಂಟ್ಸ್ ಸ್ಥಳದಲ್ಲಿ 200 ಅಡಿಕೆ ಸಸಿ ನಾಟಿ ಮಾಡಿದ್ದಾರೆ. ವ್ಯವಸ್ಥಿತ ಹಾಗೂ ಕ್ರಮಬದ್ದವಾಗಿ ತೋಟ ನಿರ್ವಹಣೆ ಮಾಡಿ, ಸಂಪೂರ್ಣ ಸಾವಯವ ವಿಧಾನ ಅನುಸರಿಸಿದ ಅವರ ತೋಟದಲ್ಲಿ ಈಗ ಪ್ರಥಮ ಇಳುವರಿ ಕೊಯ್ಲಿಗೆ ಸಿದ್ಧವಾಗಿದೆ. 80% ಇಳುವರಿ ಬರೇ ಮೂರುವರೆ ವರ್ಷದಲ್ಲಿ ಲಭಿಸುತ್ತಿದೆ.
ದಿನಕರ ಶೆಟ್ಟಿ ಅವರಿಗೆ ಸೇರಿದ ಅರ್ಧ ಎಕರೆ ಗುಡ್ಡ ಪ್ರದೇಶದಲ್ಲಿ ಮೂರುವರೆ ವರ್ಷದ ಕೆಳಗೆ ಕೃಷಿ ಮಾಡುವ ಯೋಚನೆ ಮಾಡಿದ್ದರು. ಭೂಮಿಯನ್ನು ಹಸನು ಮಾಡಿ ನಾಲ್ಕು ಅಡಿ ಆಳದ ನೇರ ಕಂಧಕಗಳನ್ನು ತೊಡಿ, ೧೦ ಅಡಿಗೊಂದರಂತೆ ಶ್ರೀಮಂಗಳ, ಇಂಟರ್ ಸಿ ಮಂಗಳ ಅಡಿಕೆ, ಸುತ್ತ ಹೈಬ್ರೀಡ್ ತೆಂಗಿನ ಗಿಡ, ಅಡಿಕೆ ಸಾಲಿನಲ್ಲಿ ಕಬ್ಬು, ಬಾಳೆ ಬೆಳೆಸಿದರು. ಕ್ರಮಬದ್ಧತೆ ಹಾಗೂ ಸುಸ್ಥಿರ ಕೃಷಿಯಲ್ಲಿ ಸ್ವಚ್ಛತೆಯ ಮಹತ್ವವನ್ನು ರೈತಾಪಿ ವರ್ಗಕ್ಕೆ ತಿಳಿಸುವ ಯೋಜನೆ ಈ ಪುಟ್ಟ ತೋಟದಲ್ಲಿ ಅವರದ್ದಾಗಿತ್ತು. ಯಾವುದೇ ತೋಟವಿರಲಿ ಅಲ್ಲಿ ಸ್ವಚ್ಛತೆ ಹಾಗೂ ಕೃಷಿಕರ ಶಿಸ್ತು ಅಲ್ಲಿ ಕಾಣಬೇಕು. ತೋಟ ಸ್ವಚ್ಛವಾಗಿದ್ದರೆ ಕೊಳೆಯಂತಹ ಬ್ಯಾಕ್ಟಿರಿಯಾ ಬಾಧೆಗಳು ಕಡಿಮೆ ಎನ್ನುವುದು ಈ ಯುವ ರೈತ ಕಂಡುಕೊಂಡ ಸತ್ಯ.
ತೋಟದಲ್ಲಿ ಸ್ವಚ್ಛತೆಯ ಪರಿಣಾಮ ಗಿಡಗಳಲ್ಲಿ ಕಾಣಬಹುದು ಎನ್ನುವುದಕ್ಕೆ ಒಂದುವರೆ ವರ್ಷ ಅಡಿಕೆ ಗಿಡಗಳೆ ಸಾಕ್ಷಿ. ಈಗಾಗಲೇ ಗಂಟು ಬಿಟ್ಟ ಫಲ ಕೊಡಲು ಈ ಅಡಿಕೆ ಗಿಡಗಳು ಸಿದ್ಧವಾಗಿವೆ. ಗಿಡಗಳ ನಾಟಿಗೆ ಕಂಧಕ ನಿರ್ಮಾಣ ಮಾಡಿದ್ದರಿಂದ ಸುಮಾರು 10 ವರ್ಷಗಳ ತನಕ ಹೊಸ ಮಣ್ಣನ್ನು ದೂರದಿಂದ ಹೊತ್ತು ತರುವ ಅಗತ್ಯವಿಲ್ಲ. ಗುಡ್ಡ ಪ್ರದೇಶವಾದ್ದರಿಂದ ನೀರನ್ನು ಹಿಡಿದಿಟ್ಟುಕೊಳ್ಳಲು, ಸಾಂದ್ರತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ತುಂತುರು ನೀರಾವರಿ ವಿಧಾನ ಬಳಕೆ ಮಾಡಿರುವುದರಿಂದ ನೀರಿನ ಮಿತವ್ಯಯದ ಜೊತೆಗೆ ಮಿಶ್ರ ಬೇಸಾಯವೂ ಸಾಧ್ಯವಾಗುತ್ತದೆ.
ಪ್ರಸ್ತುತ ಅಡಿಕೆ ಗಿಡಗಳ ತಯಾರಿಯನ್ನು ಮಾಡುತ್ತಿರುವ ಇವರು ಸಣ್ಣ ಪ್ರಮಾಣದಲ್ಲಿ ನರ್ಸರಿಯನ್ನು ಮಾಡಿದ್ದಾರೆ. ಗುಣಮಟ್ಟದ ಸುಧಾರಿತ ತಳಿಯ ಅಡಿಕೆ ಗಿಡಗಳನ್ನು ರೈತರಿಗೆ ಸರಬರಾಜು ಮಾಡುವುದು ಇವರ ಉದ್ದೇಶ. ಮಂಗಳ, ಶ್ರೀಮಂಗಳ, ಇಂಟರ್ ಸಿ ಮಂಗಳ, ಮೋಹಿತ್ ನಗರ, ಹೈಬ್ರೀಡ್ ಮೋಹಿತ್ ನಗರ, ಕುಣಿಮಂಗಳ ಗಿಡಗಳು ಇವರಲ್ಲಿ ಲಭ್ಯವಿದೆ. ಈಗಾಗಲೇ ಸಾವಿರಾರು ಅಡಿಕೆ ಗಿಡಗಳನ್ನು ಮಾರಾಟ ಮಾಡಲಾಗಿದ್ದು, ವ್ಯವಹಾರದ ದೃಷ್ಟಿಯಲ್ಲಿ ಇವರು ನರ್ಸರಿ ಆರಂಭಿಸಿಲ್ಲ. ಉತ್ತಮ ಗುಣಮಟ್ಟದ ಗಿಡಗಳು ರೈತರಿಗೆ ಸಿಗಬೇಕು ಎನ್ನುವುದು ಇವರ ಆಶಯ. ಒಟ್ಟಿನಲ್ಲಿ ಜನತೆ ಕೃಷಿಯಿಂದ ದೂರ ಸರಿಯುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಕೃಷಿಯ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿಕೊಂಡು ಕೃಷಿಯನ್ನು ಪ್ರವೃತಿಯಾಗಿ ಉಳಿಸಿ ಬೆಳೆಸುತ್ತಿರುವ ದಿನಕರ ಶೆಟ್ಟಿಯವರ ಕಾರ್ಯ ಮೆಚ್ಚುವಂತಹದು.