ಕಾಸರಗೋಡು, ಅ 29 (DaijiworldNews/SM): ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕ ಕುರಿತು ಮಂಗಳವಾರ ನಡೆದ ಕಾಸರಗೋಡು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಈ ಕುರಿತು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಪ್ರಸ್ತಾಪ ಮುಂದಿಟ್ಟರು. ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.
ಕನ್ನಡ ಅರಿಯದ ಶಿಕ್ಷಕನ ನೇಮಕ ಪ್ರತಿಭಟಿಸಿ ಮೂಡಂಬೈಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಗಮನ ನೀಡದ ಬಗ್ಗೆ ತರಾಟೆಗೆ ತೆಗೆದುಕೊಂಡರು. ಲೋಕ ಸೇವಾ ಆಯೋಗದ ರ್ಯಾಂಕ್ ಪಟ್ಟಿಯಲ್ಲಿ ಅವ್ಯವಹಾರ ನಡೆದಿದೆ. ಇದರಿಂದ ಕನ್ನಡ ಅರಿಯದ ಶಿಕ್ಷಕರ ನೇಮಕಾತಿ ನಡೆಯುತ್ತಿದೆ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಹರ್ಷಾದ್ ವರ್ಕಾಡಿ ಒತ್ತಾಯಿಸಿದರು.
ಇನ್ನು ಹರ್ಷಾದ್ ವರ್ಕಾಡಿಯವರ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ಸದಸ್ಯರಾದ ಫರೀದಾ ಝಕೀರ್, ಕೆ. ಶ್ರೀಕಾಂತ್, ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್, ಜೋಸ್ ಪಾದಲ್, ಶಾನ್ ವಾಜ್ ಪಾದೂರು ಮೊದಲಾದವರು, ಕೂಡಲೇ ಕನ್ನಡ ಮಾಧ್ಯಮ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕರ ನೇಮಕಾತಿ ಬಗ್ಗೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಬಗ್ಗೆ ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಪುಷ್ಪಾ ಕೆ.ವಿ. ಸ್ಪಷ್ಟನೆ ನೀಡಿದರೂ ತೃಪ್ತರಾಗದ ಸದಸ್ಯರು, ಈ ಕ್ಷಣದಲ್ಲೇ ಈ ಸಮಸ್ಯೆ ಪರಿಹರಿಸಬೇಕು ಯಾವುದೇ ಕಾರಣಕ್ಕೂ ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಅರಿಯದ ಶಿಕ್ಷಕರನ್ನು ಕಾಲಿಡಲು ಬಿಡುವುದಿಲ್ಲ. ಈ ಹಿಂದೆ ಮಂಗಲ್ಪಾಡಿ, ಪೈವಳಿಕೆ, ಪೆರಡಾಲ, ಬೇಕಲ ಮೊದಲಾದ ಶಾಲೆಗಳಿಗೆ ಮಲಯಾಳ ಶಿಕ್ಷಕರ ನೇಮಕಾತಿ ನಡೆದಿದೆ. ಆದರೆ ಹೋರಾಟದ ಫಲವಾಗಿ ಸಾಧ್ಯವಾಗಿಲ್ಲ. ಮತ್ತೆ ಮತ್ತೆ ಕನ್ನಡ ಅರಿಯದ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ ಎಂದು ಸದಸ್ಯರು ಹೇಳಿದರು.