ಶಿವಮೊಗ್ಗ, ಜ 8: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಭಾವನೆ ಕೆರಳಿಸುವ ಬರವಣಿಗೆ ಹಾಕುವುದನ್ನು ಚಕ್ರವರ್ತಿ ಸೂಲಿಬೆಲೆ ಕೈಬಿಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಗನನ್ನು ಕಳೆದುಕೊಂಡ ತಾಯಂದಿರು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಿ ಎಂದು ತಮ್ಮ ಫೇಸ್ ಬುಕ್ ನಲ್ಲಿ ಚಕ್ರವರ್ತಿ ಸೂಲಿಬೆಲೆ ಬರೆದುಕೊಂಡಿದ್ದಾರೆ. ಇದು ಕೋಮು ಭಾವನೆ ಕೆರಳಿಸುವ ವಿಷಯವಾಗಿದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದನ್ನು ಕೈಬಿಡಬೇಕು ಎಂದರು.
ಎಲ್ಲಾ ರಾಜಕೀಯ ಪಕ್ಷ ಹಾಗೂ ಸಂಘಟನೆಗಳು ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಬೇಕು. ಆಗ ಮಾತ್ರ ಶಾಂತಿ ಕಾಪಾಡಬಹುದು. ಇದರಿಂದ ಕರಾವಳಿಯಲ್ಲಿ ಭುಗಿಲೆದ್ದಿರುವ ಕೋಮುದಳ್ಳುರಿ ಶಮನಗೊಳ್ಳುತ್ತದೆ ಎಂದು ತಿಳಿಸಿದರು.
ಬಜರಂಗದಳ, ಆರ್.ಎಸ್.ಎಸ್. ಹಾಗೂ ಬಿಜೆಪಿ ಹಿಂದೂಗಳು ಸತ್ತಾಗ ಪ್ರತಿಭಟನೆ ನಡೆಸುತ್ತಾರೆ. ಕೋಮು ಗಲಭೆಗೆ ಮುಸ್ಲಿಂ ಯುವಕ ಬಶೀರ್ ಸಾವನ್ನಪ್ಪಿದ್ದಾನೆ. ಇವರ ಸಾವಿಗೂ ಬಿಜೆಪಿ ಪ್ರತಿಭಟಿಸಬೇಕಿತ್ತು. ಯಾಕೆ ಬಶೀರ್ ಸಾವಿನ ವಿರುದ್ಧ ಪ್ರತಿಭಟಿಸಿಲ್ಲ ಎಂದು ಪ್ರಶ್ನಿಸಿದರು.