ಮಂಗಳೂರು, ಅ 28 (Daijiworld News/MSP): "ಕಾಂಗ್ರೆಸ್ ಯಾವತ್ತೂ ಜನರ ಭಾವನೆ ಕೆರಳಿಸಿ ರಾಜಕೀಯ ಮಾಡಿಲ್ಲ. ಸಾಮರಸ್ಯವಾದ ಹಾಗೂ ಸ್ಥಿರವಾದ ಆಡಳಿತ ನಡೆಸಿದ್ದೇವೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ" ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಅ. 28ರ ಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, "ಯಾವುದೇ ಹಲ್ಲೆಗೆ ಕಾಂಗ್ರೆಸ್ ವಿರೋಧವಿದೆ. ಭಾವನೆ ಕೆರಳಿಸಿ ಮಾಡುವ ರಾಜಕೀಯಕ್ಕೂ ವಿರೋಧವಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಶೀಘ್ರದಲ್ಲೇ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಸಮರ್ಥ ಅಭ್ಯರ್ಥಿಗಳ ಆಯ್ಕೆ ಮಾಡುತ್ತೇವೆ. ಮಾತ್ರವಲ್ಲದೆ, ಎಲ್ಲಾ ಸಮುದಾಯಕ್ಕೂ ಆದ್ಯತೆ ನೀಡಲಾಗುವುದು ,ಹೊಸಬರಿಗೂ ಅವಕಾಶ ನೀಡಲಾಗುತ್ತೆ" ಎಂದು ಸ್ಪಷ್ಟಪಡಿಸಿದರು.
"ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆದಿದೆ. ತುಂಬೆ ವೆಂಟೆಡ್ ಡ್ಯಾಮ್ ಗೆ 17 ಕೋಟಿ, ಯುಜಿಡಿ ಕಾಮಗಾರಿಗೆ 200ಕೋಟಿ , ಕಾಂಗ್ರೆಸ್ ಅವಧಿಯಲ್ಲಿ ಎಡಿಬಿ ಯೋಜನೆಗೆ ಚಾಲನೆ, ಅಂಬೇಡ್ಕರ್ ಭವನ ನಿರ್ಮಾಣ, ಪಡೀಲ್ ನಲ್ಲಿ ನೂತನ ಡಿಸಿ ಕಚೇರಿ ನಿರ್ಮಾಣಕ್ಕೆ 62 ಕೋ.ಬಿಡುಗಡೆ, ವೆನ್ಲಾಕ್ ಹಾಗೂ ಲೇಡಿಗೋಷನ್ ಆಸ್ಪತ್ರೆ ಅನುದಾನ ಮೀಸಲು,ನಗರ ಪ್ರದೇಶದಲ್ಲಿ ಮಾರುಕಟ್ಟೆ ನಿರ್ಮಾಣ ಹೀಗೆ ಸಿದ್ದರಾಮಯ್ಯ ಅವಧಿಯಲ್ಲಿ ಪಾಲಿಕೆಗೆ ಸಾಕಷ್ಟು ಅನುದಾನ ಬಿಡುಗಡೆಯಾಗಿದೆ. ಹೀಗಾಗಿ ವಿಪಕ್ಷ ಸದಸ್ಯರು ಟೀಕೆ ಮಾಡುವುದು ಅನಿವಾರ್ಯವಾಗಿದೆ. ಆದರೆ ಇಷ್ಟೆಲ್ಲಾ ಅನುದಾನ ಬಿಡುಗಡೆ ಮಾಡಿಯೂ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸರ್ಕಾರದ ಖಜಾನೆ ಖಾಲಿಯಾಗಿರಲಿಲ್ಲ" ಎಂದು ವ್ಯಂಗ್ಯವಾಡಿದರು.