ಮಂಗಳೂರು, ಅ 27 (DaijiworldNews/SM): ಅಕ್ಟೋಬರ್ 25ರ ಶುಕ್ರವಾರದಂದು ವಿದ್ಯುತ್ ಶಾಕ್ ತಗುಲಿ ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನು ಇಲ್ಲಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು. ಆದರೆ, ಇಂದು ಮೃತದೇಹವನ್ನು ತೆರೆದು ನೋಡಿದಾಗ ಕುಟುಂಬಸ್ಥರಿಗೆ ಶಾಕ್ ಕಾದಿತ್ತು. ಮೃತದೇಹ ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಹಿನ್ನೆಲೆ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಮೃತ ಯುವಕನ ಸ್ನೇಹಿತರು ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತೊಕ್ಕೊಟ್ಟು ಸಮೀಪದ ನಿತ್ಯಾಧರ್ ಸೈಟ್ ನಿವಾಸಿ ವಿಲ್ಸನ್ ಫೆರ್ನಾಂಡಿಸ್ ಎಂಬವರು ಶುಕ್ರವಾರ ತಮ್ಮ ಅಂಗಡಿಯ ನಾಮಫಲಕ ದುರಸ್ಥಿಗೊಳಿಸುತ್ತಿರುವ ಸಂದರ್ಭ ವಿದ್ಯುತ್ ಶಾಕ್ ತಗುಲಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಬಳಿಕ ಅವರ ಮೃತದೇಹವನ್ನು ಇಲ್ಲಿನ ಖಾಸಗಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಅಕ್ಟೋಬರ್ 27ರ ರವಿವಾರ ಮೃತದೇಹದ ಅಂತಿಮ ಸಂಸ್ಕಾರಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿತ್ತು. ಅದರಂತೆ ರವಿವಾರದ ಮೃತದೇಹವನ್ನು ತರಲೆಂದು ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದಂತಹ ಸಂದರ್ಭದಲ್ಲಿ ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆ ವಿಲ್ಸನ್ ಕುಟುಂಬಸ್ಥರು ಹಾಗೂ ಆತನ ಹಿತೈಷಿಗಳು ಆಸ್ಪತ್ರೆ ಮುಂಭಾಗ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಆಸ್ಪತ್ರೆ ಆಡಳಿತ ಮಂಡಳಿಯನ್ನು ತರಾಟೆಗೆತ್ತಿಕೊಂಡರು.
ಸ್ಥಳಕ್ಕೆ ತೆರಳಿದ ಪೊಲೀಸರು ಆಕ್ರೋಶಿತರನ್ನು ಸಮಾಧಾನ ಪಡಿಸಿ, ಪರಿಸ್ಥಿತಿ ನಿಯಂತ್ರಿಸಿದರು.