ಉಳ್ಳಾಲ, ಅ 27 (DaijiworldNews/SM): ಪಿಯುಸಿ ವಿದ್ಯಾರ್ಥಿನಿ ಫಿಯೋನ ಕುಟಿನ್ಹಾ(16) ಹತ್ಯೆಗೈದ ಸಹೋದರ ಸ್ಯಾಮ್ಸನ್ ಜತೆ ಪೊಲೀಸರು ಸ್ಥಳ ಮಹಜರು ನಡೆಸಿದರು. ಫಾರೆನ್ಸಿಕ್ ತಂಡ ಮನೆಯ ಹಿಂಬದಿಯ ಪೊದೆಯಲ್ಲಿ ಇರಿಸಲಾದ ವಿದ್ಯಾರ್ಥಿನಿ ಕಳೇಬರವನ್ನು ಸ್ಥಳ ಪರಿಶೀಲನೆ ನಡೆಸಿ ವಶಕ್ಕೆ ಪಡೆದುಕೊಂಡರು.
ಸಹಾಯಕ ಪೊಲೀಸ್ ಆಯುಕ್ತ ಕೋದಂಡರಾಮ್ ನೇತೃತ್ವದಲ್ಲಿ ಫಿಯೋನಾ ಹತ್ಯೆ ನಡೆಸಿದ ಸಹೋದರ ಸ್ಯಾಮುವೆಲ್ ಕುಟಿನ್ಹಾ ನ ಸ್ಥಳ ಮಹಜರು ನಡೆಯಿತು. ಮನೆಯೊಳಗೆ ಮಲಗಿದ್ದ ಫಿಯೋನಾಳ ತಲೆಯ ಹಿಂಭಾಗಕ್ಕೆ ಸುತ್ತಿಗೆಯಿಂದ ಬಡಿದ ಆರೋಪಿ, ಆಕೆ ಮೃತಪಟ್ಟ ತಕ್ಷಣ ಮನೆಯಿಂದ ಅರ್ಧ ಕಿ.ಮೀ ದೂರದಲ್ಲಿರುವ ಪೊದೆಯೊಳಗೆ ಹಾಕಿ ವಾಪಸ್ಸಾಗಿದ್ದಾನೆ. ಘಟನೆ ಸಂದರ್ಭ ಮನೆಯೊಳಗೆ ಯಾರೂ ಇರಲಿಲ್ಲ. ತಾಯಿ ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರೆ, ತಂದೆ ಘಟನೆ ಸಂದರ್ಭ ಮನೆಯಲ್ಲಿರಲಿಲ್ಲ. ಪಜೀರು ಇನ್ಫೋಸಿಸ್ ಎದುರುಗಡೆ ಫ್ರಾನ್ಸಿಸ್ ಕುಟಿನ್ಹಾ ಅವರ ಶೆಡ್ ನಲ್ಲೇ ಕುಟುಂಬ ವಾಸವಿತ್ತು. ಹಿಂದೆ ಇದ್ದಂತಹ ಮನೆಯನ್ನು ಮಾರಾಟ ನಡೆಸಿದ ಬಳಿಕ ಆರು ತಿಂಗಳಿನಿಂದ ಇನ್ಫೋಸಿಸ್ ಎದುರುಗಡೆಯ ಶೆಡ್ ನಲ್ಲಿ ವಾಸವಿದ್ದರು.
ಕಾಲೇಜಿನಿಂದ ಡಿಬಾರ್ ಆಗಿದ್ದ :
ಕೊಣಾಜೆ ನಡುಪದವು ಕಾಲೇಜಿನಲ್ಲಿ ಅಶಿಸ್ತಿನಿಂದ ವರ್ತಿಸಿದ ಹಿನ್ನೆಲೆಯಲ್ಲಿ ಸ್ಯಾಮ್ಸನ್ ನನ್ನು ಕಾಲೇಜು ಆಡಳಿತ ಮಂಡಳಿ ಡಿಬಾರ್ ನಡೆಸಿತ್ತು. ಹೆಚ್ಚಾಗಿ ಮನೆಯಲ್ಲೇ ಇದ್ದುಕೊಂಡಿದ್ದ ಸ್ಯಾಮ್ಸನ್ ಗಾಂಜಾ ವ್ಯಸನಿಯೂ ಆಗಿದ್ದನು ಎನ್ನಲಾಗಿದೆ. ಮನೆಯಲ್ಲಿ ಯಾರ ಜೊತೆಗೂ ಬೆರೆಯದೇ ಇದ್ದವ ಹೆತ್ತವರ ನಿಯಂತ್ರಣಕ್ಕೂ ಸಿಗುತ್ತಿರಲಿಲ್ಲ. ಕೃತ್ಯ ಎಸಗುವ ಎರಡು ದಿನಗಳ ಮುನ್ನ ಸ್ಯಾಮ್ಸನ್ ಕೈಯಲ್ಲಿದ್ದ ಮೊಬೈಲನ್ನು ತಂದೆ ಫ್ರಾನ್ಸಿಸ್ ಪಡೆದುಕೊಂಡಿದ್ದರು. ಫಿಯೋನ ಜತೆಗೆ ಮೊಬೈಲಿದ್ದು, ಆಕೆ ಹೆಚ್ಚಾಗಿ ಮೊಬೈಲಿನಲ್ಲೇ ಆಟವಾಡುತ್ತಿದ್ದಳು. ಕೃತ್ಯ ಎಸಗುವ ದಿನದಂದೂ ಫಿಯೋನಾ ಮೊಬೈಲಿನಲ್ಲಿ ಪಬ್ ಜೀ ಆಟವಾಡುತ್ತಿದ್ದಳೆನ್ನಲಾಗಿದೆ. ಇದನ್ನು ಕಂಡು ಗಾಂಜಾ ಅಮಲಿನಲ್ಲಿ ಸ್ಯಾಮ್ಸನ್ ಕೃತ್ಯ ಎಸಗಿರುವ ಸಾಧ್ಯತೆಗಳಿವೆ.
ಪ್ರಿಯತಮೆ ಅತ್ಯಾಚಾರ ಸಂತ್ರಸ್ತೆ :
೨೦೧೭ ರಲ್ಲಿ ಸ್ಯಾಮ್ಸನ್ ಪ್ರೀತಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಈ ಪ್ರಕರಣ ಸಂಬಂಧ ರಾಜೇಶ್ ಎಂಬಾತನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದರು. ಇದೇ ಸಂದರ್ಭ ಕೊಣಾಜೆ ನಡುಪದವು ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಸ್ಯಾಮ್ಸನ್ ಮಾನಸಿಕವಾಗಿ ನೊಂದು, ಗಾಂಜಾ ವ್ಯಸನಿಯಾಗಿದ್ದಾನೆ ಎನ್ನಲಾಗಿದ್ದು, ಅಲ್ಲದೆ ಮಾನಸಿಕವಾಗಿಯೂ ಬಳಲಿದ್ದನು. ಆ ಬಳಿಕ ಏಕಾಂಗಿಯೇ ಹೆಚ್ಚಾಗಿ ಇರುತ್ತಿದ್ದನು.