ಉಳ್ಳಾಲ, ಅ 27 (Daijiworld News/MSP): ನಿಗೂಢವಾಗಿ ನಾಪತ್ತೆಯಾಗಿದ್ದ ಅಪ್ರಾಪ್ತೆ ವಿದ್ಯಾರ್ಥಿನಿ ಮೃತದೇಹ ಆಕೆ ಮನೆ ಸಮೀಪದ ಹಿಂಬದಿಯ ಮುಡಿಪು ಗುಡ್ಡದಲ್ಲಿ 18 ದಿನಗಳ ಬಳಿಕ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಹೋದರನೇ ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿ ಎಸೆದಿರುವುದಾಗಿ ತನಿಖೆ ವೇಳೆ ಪೊಲೀಸರಿಗೆ ಗೊತ್ತಾಗಿದೆ.
ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಫ್ರಾನ್ಸಿಸ್ ಕುಟಿನ್ಹೊ ಎಂಬವರ ಪುತ್ರಿ ಸಂತ ಆಗ್ನೇಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಫಿಯೋನಾ ಸ್ವೀಡಲ್ ಕುಟಿನ್ಹಾ (16) ಹತ್ಯೆಯಾದ ವಿದ್ಯಾರ್ಥಿನಿ. ಈಕೆಯ ಹಿರಿಯ ಸಹೋದರ ಸ್ಯಾಮ್ಸನ್ (18) ಹತ್ಯೆ ನಡೆಸಿರುವುದಾಗಿ ತನಿಖೆ ವೇಳೆ ಗೊತ್ತಾಗಿದೆ. ಅ.8 ರಂದು ಫಿಯೋನಾ ಮಂಗಳೂರಿಗೆ ಹೋಗುವುದಾಗಿ ತಿಳಿಸಿ ನಾಪತ್ತೆಯಾಗಿದ್ದಳೆಂದು ಮನೆ ಮಂದಿ ಕೊಣಾಜೆ ಠಾಣೆಯಲ್ಲಿ ಅ.9 ರಂದು ಬೆಳಿಗ್ಗೆ ನಾಪತ್ತೆ ದೂರು ದಾಖಲಿಸಿದ್ದರು. 15 ದಿನಗಳು ಕಳೆದರೂ ವಿದ್ಯಾರ್ಥಿನಿ ಫಿಯೋನಾ ಪತ್ತೆಯಾಗದ ಹಿನ್ನೆಲೆಯಲ್ಲಿ ಮುಡಿಪು ನಿವಾಸಿಗಳ ನಿಯೋಗ ಬಾಲಕಿ ಶೀಘ್ರವೇ ಪತ್ತೆಹಚ್ಚುವಂತೆ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತ್ತು. ಪೊಲೀಸ್ ಆಯುಕ್ತರು ಪ್ರಕರಣವನ್ನು ಸಹಾಯಕ ಪೊಲೀಸ್ ಆಯುಕ್ತರಿಗೆ ತನಿಖೆ ನಡೆಸುವಂತೆ ನಿರ್ದೇಶಿಸಿದ್ದರು. ಅದರಂತೆ ಹಲವು ಆಯಾಮಗಳಲ್ಲಿ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ಕೊಣಾಜೆ ಪೊಲೀಸರ ತಂಡ ವಿಚಾರಣೆ ನಡೆಸಿದ್ದರೂ ವಿದ್ಯಾರ್ಥಿನಿ ಫಿಯೋನಾ ನಾಪತ್ತೆ ಪ್ರಕರಣ ಬೇಧಿಸಲು ಅಸಾಧ್ಯವಾಗಿತ್ತು. ವಿದ್ಯಾರ್ಥಿನಿ ಮೊಬೈಲ್ನ ಕೊನೆಯ ನೆಟ್ವರ್ಕ್ ಅನ್ನು ಪರಿಶೀಲಿಸಿದಾಗ ಅದು ಮುಡಿಪು ಭಾಗದಲ್ಲೇ ತೋರಿಸುತಿತ್ತು. ಅದರ ಆಧಾರದಡಿ ಪೊಲೀಸರು ಮನೆಮಂದಿಯನ್ನೇ ಹೆಚ್ಚಿನ ವಿಚಾರಣೆಗೆ ಪಡೆದುಕೊಂಡಿದ್ದರು. ಶನಿವಾರ ಸಹೋದರ ಸ್ಯಾಮ್ಸನ್ ಅನ್ನು ವಿಚಾರಣೆಗೆ ತೆಗೆದುಕೊಂಡು ಹೆಚ್ಚುವರಿಯಾಗಿ ವಿಚಾರಿಸಿದಾಗ ಸಹೋದರಿ ಫಿಯೋನಾಳನ್ನು ಹತ್ಯೆ ನಡೆಸಿರುವುದಾಗಿಯೂ, ಹಾಗೂ ಮೃತದೇಹವನ್ನು ಮುಡಿಪು ಗುಡ್ಡದಲ್ಲಿ ಎಸೆದಿರುವುದಾಗಿ ಬಾಯಿ ಬಿಟ್ಟಿದ್ದಾನೆ. ಅದರಂತೆ ತಡರಾತ್ರಿ ವೇಳೆ ಪೊಲೀಸರು ಮುಡಿಪು ಗುಡ್ಡದಲ್ಲಿ ಪರಿಶೀಲಿಸಿದಾಗ ದೇಹ ಸಂಪೂರ್ಣ ಕೊಳೆತು ಅಸ್ತಿಪಂಜರ ಮಾತ್ರ ಪತ್ತೆಯಾಗಿದೆ. ಮನೆಯಲ್ಲಿ ಯಾರೂ ಇರದ ಸಂದರ್ಭ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಸಹೋದರ-ಸಹೋದರಿ ನಡುವೆ ಗಲಾಟೆ ನಡೆದು ಸುತ್ತಿಗೆಯಿಂದ ತಲೆಗೆ ಬಡಿದು ಹತ್ಯೆ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜೋರಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ಮೃತದೇಹ ಇರುವ ಪ್ರದೇಶದಲ್ಲಿ ಮಹಜರು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿರುವ ಸಾಧ್ಯತೆಗಳಿದ್ದು, ಅಲ್ಲದೆ ಆರೋಪಿ ಸ್ಯಾಮ್ಸನ್ ಮಾದಕ ದ್ರವ್ಯ ವ್ಯಸನಿಯೂ ಆಗಿದ್ದನೆಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಕಾರ್ತಿಕ್ರಾಜ್ ಹತ್ಯೆ ನೆನಪಿಸುವ ಪ್ರಕರಣ
ಪಜೀರು ಗ್ರಾಮದಲ್ಲೇ 2017ರಲ್ಲಿ ಪಜೀರು ಗ್ರಾಮದ್ದೇ ನಿವಾಸಿ ಕಾರ್ತಿಕ್ ರಾಜ್ ಹತ್ಯೆಯಾಗಿತ್ತು. ಎಂಟು ತಿಂಗಳುಗಳ ಕಾಲ ಪ್ರಕರಣ ಬೇಧಿಸುವಲ್ಲಿ ಕೊಣಾಜೆ ಪೊಲೀಸರು ವಿಫಲರಾಗಿದ್ದರು. ಈ ಕುರಿತು ಹಲವು ಪ್ರತಿಭಟನೆಗಳು ನಡೆದಿತ್ತು. ಪೊಲೀಸ್ ವಿಚಾರಣೆ ವೇಳೆ ಕಾರ್ತಿಕ್ರಾಜ್ ನನ್ನು ಒಡಹುಟ್ಟಿದ ಸಹೋದರಿ ಕಾವ್ಯಶ್ರೀ ಪ್ರಿಯಕರ ಗೌತಂ ಹಾಗೂ ಆತನ ಸಹೋದರ ಗೌರವ್ ಎಂಬವರನ್ನು ಬಂಧಿಸಲಾಗಿತ್ತು. ಇದೀಗ ಮೂವರು ಸಾಕ್ಷ್ಯಾಧಾರವಿಲ್ಲದೆ ಪ್ರಕರಣದಿಂದ ಖುಲಾಸೆಗೊಂಡಿದ್ದರು. ಅಲ್ಲಿ ಸಹೋದರನನ್ನು ಸಹೋದರಿ ಹತ್ಯೆಗೈದರೆ, ಇಲ್ಲಿ ಸಹೋದರಿಯನ್ನು ಸಹೋದರ ಹತ್ಯೆ ನಡೆಸಿದ್ದಾನೆ. ಆದರೆ ವಿಚಿತ್ರವೆಂದರೆ ಘಟನೆ ನಡೆದಿರುವುದು ಒಂದೇ ಪಜೀರು ಗ್ರಾಮದಲ್ಲಿ.