ಮಂಗಳೂರು, ಜ 8: ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ದೀಪಕ್ ರಾವ್ ನಿವಾಸಕ್ಕೆ ಬಿಗ್ ಬಾಸ್ ಸೀಸನ್ 4 ವಿಜೇತ ಪ್ರಥಮ್ ಭೇಟಿ ನೀಡಿದ್ದು, ಕುಟುಂಬದವರಿಗೆ ಸಾಂತ್ವನ ಹೇಳಿದ್ದಾರೆ.
ಪ್ರಥಮ್ ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಸಹಾಯಧನ ವಿತರಿಸಿದ್ದು, ಈ ಮೂಲಕ ಮೃತ ದೀಪಕ್ ರಾವ್ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ.
ಅಮಾಯಕರ ಹತ್ಯೆಯನ್ನು ಖಂಡಿಸಿದ ಪ್ರಥಮ್, ಮಂಗಳೂರನ್ನು ಯಾಕೆ ಕ್ಲೀನ್ ಸಿಟಿ ಎನ್ನುತ್ತೀರಿ.. ಇಲ್ಲಿ ನೆತ್ತರು ಹರಿದು ಕೆಂಪಾಗಿದೆ. ಇದು ಕ್ಲೀನ್ ಸಿಟಿಯೇ..? ಎಂದು ಪ್ರಶ್ನಿಸಿದ್ದಾರೆ.
ದೀಪಕ್ ರಾವ್ ಕುಟುಂಬದವರು ಇನ್ನೂ ಶಾಕ್ ನಿಂದ ಹೊರಗೆ ಬಂದಿಲ್ಲ. ಎಲ್ಲರೂ ಸಾಮರಸ್ಯದಿಂದ ಇರಬೇಕು. ಪ್ರಾಣ ತೆಗೆಯುವ ಹಕ್ಕು ಯಾರಿಗೂ ಇಲ್ಲ. ಸುಂದರ ಸಮಾಜ ನಿರ್ಮಾಣವಾಗಬೇಕೆಂದರೆ ಇಂತಹ ಮುಗ್ಧರ ಹತ್ಯೆ ನಿಲ್ಲಬೇಕು. ಯಾರೇ ಆಗಲಿ ಕೊಲ್ಲುವುದು ತಪ್ಪು. ಈ ಹತ್ಯೆಮಾಡಿದ ಆಯೋಗ್ಯರಿಗೆ ಉಗ್ರ ಶಿಕ್ಷೆಯಾಗಲಿ ಎಂದು ತಮ್ಮ ಫೇಸ್ಬುಕ್ನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ.
ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ, ಮೃತಪಟ್ಟಿರುವ ಅಮಾಯಕ ಬಶೀರ್ ಸಾವಿಗೂ ಸಾಂತಾಪ ಸೂಚಿಸಿದ್ದು, ಕ್ಷುಲ್ಲಕ ಕಾರಣಕ್ಕೆ ಹತ್ಯೆಯಾಗಿರುವ ಬಶೀರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.