ಬೆಳ್ತಂಗಡಿ, ಅ 26 (Daijiworld News/MSP): ತಾಲೂಕಿನ ನೆರೆಹಾವಳಿಯಿಂದ ಅನೇಕ ಕೃಷಿ ಭೂಮಿಗಳು ಹಾಗೂ ಕಿಂಡಿಅಣೆಕಟ್ಟುಗಳು, ಸೇತುವೆಗಳು ಹಾನಿಯಾಗಿದ್ದು ಇವುಗಳ ದುರಸ್ಥಿಗೆ 30 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಇಲಾಖಾ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.
ಅವರು ಶನಿವಾರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೆಟಿ ನೀಡಿ ಅಲ್ಲಿ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಳಿಕ ಪ್ರವಾಹ ಪೀಡಿತ ಪ್ರದೇಶಗಳಾದ ಕುಕ್ಕಾವು, ಪರ್ಲಾಣಿ, ಚಾರ್ಮಾಡಿ ಅರಣೆಪಾದೆ ಪ್ರದೇಶಗಳಿಗೆ ಭೇಟಿ ನೀಡಿ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದರು.
ಪ್ರಕೃತಿ ವಿಕೋಪದಿಂದ ನದಿ ತೀರದ ಪ್ರದೇಶಗಳು ಹಾಗೂ ಅಲ್ಲಿರುವ ಕೃಷಿ ಭೂಮಿಗಳು ನಾಶವಾಗಿದ್ದು ಜನರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ ಅಣೆಕಟ್ಟುಗಳು, ಸೇತುವೆಗಳು ಹಾನಿಯಾಗಿದ್ದು ಮಳೆ ಕಡಿಮೆಯಾದ ತಕ್ಷಣ ಹಾನಿಯಾದ ಕಿಂಡಿಅಣೆಕಟ್ಟುಗಳ ದುರಸ್ಥಿ ಕಾರ್ಯ ಮಾಡಲಾಗುವುದು. ಅಲ್ಲದೆ ನೀರು, ಕೃಷಿ ಭೂಮಿಗೆ ಬರದ ರೀತಿಯಲ್ಲಿ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ಇಲ್ಲಿನ ಶಾಸಕ ಹರೀಶ್ ಪೂಂಜಾರವರು ಈಗಾಗಲೇ ಮನವಿಮಾಡಿದ್ದು ಈ ಬಗ್ಗೆ ಇಲಾಖೆ ಗಂಭೀರವಾಗಿ ಚಿಂತಿಸಿದೆ. ತಡೆಗೋಡೆ ನಿರ್ಮಾಣ ಮಡಬೇಕಾದರೆ ಅದಕ್ಕೆ ಬೇಕಾದ ಮಣ್ಣಿನ ಸಾಂದ್ರತೆ ಮತ್ತು ವೈಜ್ಞಾನಿಕ ವಿಧಾನಗಳನ್ನು ಬಳಸಬೇಕಾಗಿದೆ.ಅದಕ್ಕಾಗಿ ತಂತ್ರಜ್ಞರನ್ನು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಲು ಸೂಚಿಸಲಾಗಿದ್ದು ಅವರ ವರದಿ ಆಧಾರದಂತೆ ತಡೆಗೋಡೆ ನಿರ್ಮಾಣಕ್ಕೆ ಮಂಜೂರು ನೀಡಲಾಗುವುದು.ಹಾನಿಯಾದ ಕೃಷಿ ಪ್ರದೇಶಗಳಿಗೆ ಕೇಂದ್ರದ ಹಾಗೂ ರಾಜ್ಯದ ನಿಯಮಾನುಸಾರ ಪರಿಹಾರವನ್ನು ಬಿಡುಗಡೆಮಾಡಲಾಗಿದೆ ಎಂದರು.
ಕೃಷಿ ಭೂಮಿಯಲ್ಲಿ ಹಾಗೂ ನದಿಗಳಲ್ಲಿ ಮರಳು ತುಂಬಿದ್ದು ಇದನ್ನು ತೆರವುಗೊಳಿಸುವಂತೆ ಸ್ಥಳೀಯರು ಸಚಿವರಲ್ಲಿ ಮನವಿ ಮಾಡಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಮರಳು ತೆಗೆಯಲು ಸರಕಾರದಿಂದ ಏನೂ ಅಭ್ಯಂತರವಿಲ್ಲ ಆದರೆ ತೆಗೆದ ಮರಳನ್ನು ಎಲ್ಲಿ ಹಾಕುವುದು ಎಂಬುದರ ಬಗ್ಗೆಯೂ ಯೋಚಿಸಬೇಕಾಗಿದೆ. ನದಿಯಿಂದ ತೆಗೆದು ಮತ್ತೆ ನದಿ ದಂಡೆಯಲ್ಲಿ ಹಾಕಿದರೆ ಅದು ಮತ್ತೆ ನೀರಿನೊಂದಿಗೆ ಸೇರುತ್ತದೆ. ಅಥವಾ ಬೇರೆ ಪ್ರದೇಶಗಳಲ್ಲಿ ಹಾಕಿದರೆ ಅಲ್ಲಿನ ಜನರಿಗೆ ಸಮಸ್ಯೆಯಾಗುತ್ತದೆ. ಇದೆಲ್ಲವನ್ನು ಪರಿಗಣಿಸಿ ಈ ಭಾಗದ ಹೂಳೆತ್ತುವ ಬಗ್ಗೆ ಚಿಂತಿಸಲಾಗುತ್ತದೆ ಎಂದರು. ಅಲ್ಲದೆ ಮಳೆಯಿಂದಾಗಿ ವಿದ್ಯುತ್ ಸಂಪರ್ಕ ಹಾಳಾಗಿದ್ದರೂ ತಕ್ಷಣ ಇದನ್ನು ದುರಸ್ಥಿಗೊಳಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದರು.
ಮುಖ್ಯಮಂತ್ರಿಗಳ ಸೂಚನೆ
ರಾಜ್ಯದ ಮುಖ್ಯಮಂತ್ರಿಗಳಾದ ಯೆಡಿಯೂರಪ್ಪನವರು ಮಂತ್ರಿಗಳನ್ನು ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಅಧ್ಯಯನ ಮಾಡಲು ಸೂಚಿಸಿದ್ದು ಇದರಂತೆ ನೆರೆಪೀಡಿತ ಪ್ರದೇಶಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ಈ ಭಾಗದ ಸಮಸ್ಯೆ ಪರಿಹಾರಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಹರೀಶ್ ಪೂಂಜಾ ತಾಲೂಕಿನಲ್ಲಿ ಹಾನಿಗೊಳಗಾದ ಪ್ರದೇಶದ ಬಗ್ಗೆ ಸಚಿವರಲ್ಲಿ ಮಾಹಿತಿ ನೀಡಿದರು. ಬಳಿಕ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಇದಕ್ಕೆ ಸಚಿವರು ಅನುದಾಣ ಬಿಡುಗಡೆಗೊಳಿಸುವ ಕುರಿತು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷೆ ಶೈಲಜಾ, ಜಿ.ಪಂ ಸದಸ್ಯೆ ಸೌಮ್ಯಲತಾ ಜಯಂತ್ ಗೌಡ, ತಾ.ಪಂ ಸದಸ್ಯ ಕೊರಗಪ್ಪ ಗೌಡ, ಸಣ್ಣ ನೀರಾವರಿ ಇಲಾಖಾ ಅಧೀನ ಕಾರ್ಯದರ್ಶಿ ಮೃತ್ಯುಂಜಯ ಸ್ವಾಮಿ, ಸಹಾಯಕ ಇಂಜಿನಿಯರ್ ಪ್ರಸನ್ನ, ರಾಕೇಶ್, ತಹಶಿಲ್ದಾರ್ ಗಣಪತಿ ಶಾಸ್ತ್ರಿ, ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ, ಜಯಕೀರ್ತಿ, ಉಪಸ್ಥಿತರಿದ್ದರು.