ಮಂಗಳೂರು, ಅ 25 (DaijiworldNews/SM): ‘ಕ್ಯಾರ್’ ಚಂಡಮಾರುತದ ಎಫೆಕ್ಟ್ ಎಂಬಂತೆ ಕರಾವಳಿ ಭಾಗದಲ್ಲಿ ಅದರಲ್ಲೂ ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದ್ದು, ರಾತ್ರಿ ಮಳೆಯ ಆರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಟೋಬರ್ 26ರ ಶನಿವಾರದಂದು ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಈ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಭಾರೀ ಮಳೆಯ ಹಿನ್ನೆಲೆಯಲ್ಲಿ ಶುಕ್ರವಾರದಂದು ರಜೆ ನೀಡಲಾಗಿತ್ತು. ಮಳೆ ಮುಂದುವರೆದ ಹಿನ್ನೆಲೆಯಲ್ಲಿ ಶನಿವಾರವೂ ಕೂಡ ರಜೆ ಘೋಷಣೆ ಮಾಡಲಾಗಿದೆ.
ಇನ್ನು ಶನಿವಾರದಂದು ಉಡುಪಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಶುಕ್ರವಾರ ಸಂಜೆಯೇ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಯಾರಿಗೆಲ್ಲಾ ರಜೆ:
ದ.ಕ. ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಂದ ಆರಂಭಿಸಿ ಪದವಿ ಪೂರ್ವ ಕಾಲೇಜಿನ ವರೆಗೆ ರಜೆ ಘೋಷಣೆ ಮಾಡಲಾಗಿದೆ. ಪಿಯು ನಂತರದ ಅಂದರೆ ಪದವಿ ಹಾಗೂ ಅದಕ್ಕಿಂತ ಮೇಲ್ಪಟ್ಟವರಿಗೆ ರಜೆ ಆದೇಶ ಅನ್ವಯವಾಗುವುದಿಲ್ಲ. ಜಿಲ್ಲೆಯಲ್ಲಿರುವ ಪಿಯುಸಿ ತನಕದ ಎಲ್ಲಾ ಖಾಸಗಿ ಹಾಗೂ ಸರಕಾರಿ ಸಂಸ್ಥೆಗಳಿಗೆ ಕಡ್ಡಾಯವಾಗಿ ರಜೆ ನೀಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಮುಂದಿನ ಮೂರು ದಿನಗಳ ಕಾಲ ಮೀನುಗಾರರು ಸಮುದ್ರದತ್ತ ತೆರಳದಂತೆ ಜಿಲ್ಲಾಧಿಕಾರಿಗಳು ಎಚ್ಚರಿಕೆ ರವಾನಿಸಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲೂ ರಜೆ:
ಇನ್ನು ಕಾಸರಗೋಡು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಗಾಳಿ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಶನಿವಾರದಂದೂ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಸಜಿತ್ ಬಾಬು ಆದೇಶ ಹೊರಡಿಸಿದ್ದಾರೆ. ಪೂರ್ವ ನಿಗಧಿತ ಕಲೋತ್ಸವ ಹಾಗೂ ಪರೀಕ್ಷೆಯಲ್ಲಿ ಬದಲಾವಣೆ ಇಲ್ಲ ಎಂದು ಅವರು ತಿಳಿಸಿದ್ದಾರೆ.