ಮಂಗಳೂರು ಜ 08: ದುಷ್ಕರ್ಮಿಗಳಿಂದ ಹತ್ಯೆಯಾದ ಅಮಾಯಕ ಯುವಕ ದೀಪಕ್ ರಾವ್ ಮನೆಗೆ ಜ. 7 ರ ಭಾನುವಾರ ಸಂಜೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ದೀಪಕ್ ಬಗ್ಗೆ ಹಾಗೂ ಆತ ಕುಟುಂಬಕ್ಕಾಗಿ ಹೊಂದಿದ್ದ ಸಾಲದ ಕುರಿತ ಮಾಹಿತಿ ಪಡೆದ ಸಿಎಂ ದೀಪಕ್ ತಮ್ಮ ಸತೀಶ್ ಗೆ ಎಂಆರ್ ಪಿಎಲ್ ನಲ್ಲಿ ಕೆಲಸ ಒದಗಿಸುವ ಭರವಸೆ ನೀಡಿದ್ರು. ಅಲ್ಲದೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಡಿಸಿ ಸಸಿಕಾಂತ್ ಸೆಂಥಿಲ್ ರಿಗೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ರು. ಇನ್ನು ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಕುಟುಂಬಸ್ಥರು ಮನವಿ ಮಾಡಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಿಎಂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಇನ್ನು ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮೃತಪಟ್ಟ ಬಶೀರ್ ನಿವಾಸಕ್ಕೂ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿರಲಿ ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದ್ರು. ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳಿಂದ ಶಾಂತಿ ಕದಡುವ ಕೃತ್ಯಗಳು ನಡೆಯುತ್ತಿದ್ದು, ಅವುಗಳನ್ನು ಮಟ್ಟಹಾಕಲಾಗುವುದೆಂದರು. ಈ ಸಂದರ್ಭ
ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್, ಮೇಯರ್ ಕವಿತಾ ಸನಿಲ್ ಸಿಎಂ ಜೊತೆಗಿದ್ದರು.