ಚಾರ್ಮಾಡಿ, ಅ 24 (DaijiworldNews/SM): ಭೀಕರ ಪ್ರವಾಹಕ್ಕೆ ಕೊಚ್ಚಿ ಹೋದ ಚಾರ್ಮಾಡಿ ನದಿ ಪಾತ್ರಗಳಲ್ಲಿ ತಡೆಗೋಡೆ ಹಾಗೂ ಅಂತರ ಎಂಬಲ್ಲಿಗೆ ಸೇತುವೆಯ ನಿರ್ಮಾಣಕ್ಕೆ ಸಹಕರಿಸುವುದಾಗಿ ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಕ್ಟೋಬರ್ ೨೪ರಂದು ಚಾರ್ಮಾಡಿಗೆ ಭೇಟಿ ನೀಡಿದ ಅವರು, ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು.
ಆಗಸ್ಟ್ 9ರಂದು ಸಂಭವಿಸಿದ ಜಲಸ್ಫೋಟದ ಸಂದರ್ಭ ನಾಶವಾದ ಚಾರ್ಮಾಡಿ ಪ್ರದೇಶದ ಅರಣಪಾದೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಈ ವೇಳೆ ಮಾತನಾಡಿದ ಅವರು ನಿಸರ್ಗದ ವಿಕೋಪದ ಪರಿಣಾಮ, ನದಿಯ ಪಾತ್ರ ಸಂಪೂರ್ಣ ಬದಲಾವಾಣೆಯಾಗಿದೆ. ಹಲವಾರು ವರ್ಷಗಳಿಂದ ಬೆಳೆಸಿದ ಕೃಷಿ ನಾಶವಾಗಿದೆ. ಜನರ ಅಹವಾಲಿಗೆ ಅನುಸಾರವಾಗಿ ಇಲ್ಲಿನ ಶಾಶ್ವತ ಪರಿಹಾರದ ನಿಟ್ಟಿನಲ್ಲಿ ಸುಮಾರು ಎರಡೂವರೆ ಕಿ.ಮೀ.ನಷ್ಟು ಶಾಶ್ವತ ತಡೆಗೋಡೆ ಹಾಗೂ ಸೇತುವೆಗೆ ಕೂಡಲೇ ಮಂಜೂರಾತಿ ನೀಡುತ್ತೇನೆ ಎಂದರು.
ಇಲ್ಲಿನ ಭೌಗೋಳಿಕತೆಗೆ ಅನುಸಾರವಾಗಿ ದೀರ್ಘಾವಧಿ ಪರಿಹಾರವನ್ನು ತಜ್ಞರ ಜೊತೆ ಚರ್ಚಿಸಿ ಅನುಷ್ಠಾನಕ್ಕೆ ತರಲಿದ್ದೇವೆ. ಬರುವಂತಹ ದಿನಗಳಲ್ಲಿ ನೀರಿನ ಬಳಕೆಯ ಬಗ್ಗೆಯೂ ದೂರದೃಷ್ಟಿಯ ಯೋಜನೆಗಳನ್ನು ತರಲಾಗುವುದು. ಪಶ್ಚಿಮ ಘಟ್ಟ ಪ್ರದೇಶಗಳು ಅತೀ ಸೂಕ್ಷ್ಮ ಪರಿಸರವನ್ನು ಹೊಂದಿರುವಂತಹದು. ಹೀಗಾಗಿ ಇಲ್ಲಿನ ಭೌಗೋಳಿಕತೆಗೆ ಮನುಷ್ಯನಿಂದ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಮನುಷ್ಯನ ಕ್ರಿಯಾ ಚಟುವಟಿಕೆಗಳಿಗೆ, ಅಭಿವೃದ್ದಿಗೆ ತೊಂದರೆಯಾಗದಂತೆ ಪ್ರಕೃತಿಯನ್ನು ಉಳಿಸಬೇಕು. ಎಕೋ ಸೆನ್ಸಿವಿಟಿ ಕಾಯ್ದುಕೊಳ್ಳಬೇಕಾಗುತ್ತದೆ ಎಂದರು.
ಇನ್ನು ಹಾನಿಯಾದ ಐದು ಪಟ್ಟು ಪರಿಸರಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಅರಣ್ಯ ಇಲಾಖೆಯ ಮೂಲಕ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಅರಣ್ಯ ಮಾಫಿಯಾದ ಬಗ್ಗೆ ಗಮನ ಹರಿಸುತ್ತೇನೆ ಎಂದರು. ಈ ವೇಳೆ ಶಾಸಕ ಹರೀಶ್ ಪೂಂಜಾ ತಾಲೂಕಿನಲ್ಲಾದ ಸಮಸ್ಯೆಗಳ ಬಗ್ಗೆ ಸಚಿವರಿಗೆ ವಿವರಿಸಿದರು.