ಬ್ರಹ್ಮಾವರ, ಅ 24 (Daijiworld News/MSP): ಕರ್ತವ್ಯದಲ್ಲಿದ್ದ ಕೋಟ ಪಿಎಸ್ಐ ನಿತ್ಯಾನಂದ ಗೌಡ ಅವರಿಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರೂರು ಮೂರುಕೈ ಜಂಕ್ಷನ್ ಎಂಬಲ್ಲಿ ಈ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗುರುಪ್ರಸಾದ್, ದಿಲೀಪ್, ಸುನೀಲ್, ಕಿರಣ್ ಎನ್ನುವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಚಾಲಕನೊಂದಿಗೆ ಕರ್ತವ್ಯದಲಿದ್ದ ಕೋಟ ಪಿಎಸ್ಐ ನಿತ್ಯಾನಂದ ಗೌಡ ಶಿರೂರು ಮೂರುಕೈ ಜಂಕ್ಷನ್ ಬಳಿ ಮೂರು ಜನ ಯುವಕರು ಅನುಮಾನಸ್ಪದವಾಗಿ ನಿಂತಿದ್ದನ್ನು ಗಮನಿಸಿದ್ದಾರೆ.
ಕೂಡಲೇ ಪಿಎಸ್ಐ ನಿತ್ಯಾನಂದ ಗೌಡ ಹಾಗು ಜೀಪು ಚಾಲಕ ಅವರನ್ನು ಅಡ್ಡಗಟ್ಟಿ ಮೂವರ ಹೆಸರು ವಿಳಾಸ ಕೇಳಿದಾಗ ಅವರು ಯಾವುದೇ ಸಮರ್ಪಕ ಉತ್ತರ ನೀಡಿರಲಿಲ್ಲ. ಅವರನ್ನು ಜೀಪ್ ನಲ್ಲಿ ಠಾಣೆಗೆ ಕರೆತರುವಾಗ, ಪ್ರಮುಖ ಆರೋಪಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ. ಆತನೊಂದಿಗೆ ಇತರ 8 ರಿಂದ 10 ಮಂದಿ ಯುವಕರು ಜೀಪ್ ಮುಂದೆ ಹೋಗದಂತೆ ಅಡ್ಡಗಟ್ಟಿದ್ದಾರೆ. ಈ ಸಂಬಂಧ ಸದ್ಯ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.