ಕಡಬ, ಅ 23 (DaijiworldNews/SM): ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯೊಬ್ಬರ ಮಾನಭಂಗಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಅಕ್ಟೋಬರ್ ೨೩ರಂದು ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ ನಡೆದಿದೆ. ಬಂಧಿತ ಆರೋಪಿಯನ್ನು ಬೆಂಗಳೂರಿನ ಕೆಂಗೇರಿ ನಿವಾಸಿ ಮಂಜು(27) ಎಂದು ಗುರುತಿಸಲಾಗಿದೆ.
ನೆಟ್ಟಣದಿಂದ ಮಂಗಳೂರಿಗೆ ತೆರಳುತ್ತಿದ್ದ ರೈಲಿನ ಮಹಿಳಾ ಬೋಗಿಗೆ ಹತ್ತಿದ ಆರೋಪಿಯು ಮಹಿಳೆ ಒಬ್ಬರೇ ಇರುವುದನ್ನು ಕಂಡು ಮಾನಭಂಗಕ್ಕೆ ಯತ್ನಿಸಿದ್ದಾರೆ. ಈ ವೇಳೆ ಮಹಿಳೆ ಚೈನ್ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ಆದರೆ, ತಕ್ಷಣವೇ ಆರೋಪಿ ರೈಲಿನಿಂದ ಹಾರಿ ಪರಾರಿಯಾಗಲು ಯತ್ನಿಸಿದ್ದಾನೆ.
ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಕೋಡಿಂಬಾಳದಲ್ಲಿ ಸಾರ್ವಜನಿಕರು ಹಿಡಿದು ಕಡಬ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಡಬ ಪೊಲೀಸರು ಆರೋಪಿಯನ್ನು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ಈ ನಡುವೆ ಮಾನಭಂಗಕ್ಕೆ ಯತ್ನಿಸಿದ ವೇಳೆ ಇಬ್ಬರಿದ್ದು, ಓರ್ವ ಬಜಕೆರೆ ರೈಲ್ವೇ ನಿಲ್ದಾಣದಲ್ಲಿ ಇಳಿದು ನೆಟ್ಟಣ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾನೆ ಎಂಬ ವಿಚಾರ ಸಾರ್ವಜನಿಕವಾಗಿ ಹರಡಿದ್ದರಿಂದ ಮೂಜೂರು ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ನೇಪಾಳ ನಿವಾಸಿ ಬಬ್ಲು ಎಂಬಾತನನ್ನು ತಡೆಹಿಡಿದ ಸಾರ್ವಜನಿಕರು ಆತನನ್ನು ಕಡಬ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.
ಆತನನ್ನು ವಿಚಾರಿಸಿದಾಗ ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಘಟನೆಗೂ ಈತನಿಗೂ ಸಂಬಂಧವಿಲ್ಲ ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಆದರೆ ಹೆಚ್ಚಿನ ವಿಚಾರಣೆಗಾಗಿ ಇಬ್ಬರನ್ನೂ ಕೂಡ ಕಡಬ ಪೊಲೀಸರು ಪುತ್ತೂರು ರೈಲ್ವೇ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.