ಮಂಗಳೂರು ಜ 07 : ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ಜ 20 ರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರವನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಶನಿವಾರ್ ಸಕಲೇಶಪುರದಲ್ಲಿ ನಡೆದ ವಿವಿಧ ಇಲಾಖೆಗಳ ಸಭೆಯಲ್ಲಿ ಚರ್ಚಿಸಿ ಮಾತನಾಡಿದ ಸಚಿವ ಡಾ| ಎಚ್ ಸಿ ಮಹಾದೇವಪ್ಪ, ಶಿರಾಡಿ ಘಾಟ್ ನಲ್ಲಿ 12.38 ಕಿ.ಮೀ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು , 61.57 ಕೋಟಿ ರೂ ಅಂದಾಜಿನ ಕಾಮಗಾರಿಯನ್ನು ಜ 20 ರಿಂದ ಆರಂಭಿಸಿ ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಆಗಿರುವ 5 ತಿಂಗಳ ಅವಧಿಯಲ್ಲಿ ವಾಹನ ಸಂಚಾರಕ್ಕೆ 7 ಪರ್ಯಾಯ ರಸ್ತೆ ಗುರುತಿಸಲಾಗಿದೆ ಎಂದರು. ಇನ್ನು ಶಿರಾಡಿ ಘಾಟ್ ರಸ್ತೆ ಸುಮಾರು 26 ಕಿ.ಮೀ ಉದ್ದವಿದ್ದು ತಾಂತ್ರಿಕವಾಗಿ ಚತುಷ್ಪದ ರಸ್ತೆಯನ್ನಾಗಿ ನಿರ್ಮಿಸಲು ಸಾಧ್ಯವಾಗದ ಕಾರಣ ದ್ವಿ ಪಥ ರಸ್ತೆಯನ್ನೇ ಅಭಿವೃದ್ದಿಪಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.