ಮಂಗಳೂರು, ಅ.23(Daijiworld News/SS): ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್'ಗಳೂ ಸೇರಿದಂತೆ ರಾಜ್ಯದ ಒಟ್ಟು 14 ನಗರ ಸ್ಥಳೀಯ ಸಂಸ್ಥೆಗಳಿಗೆ ನವಂಬರ್ 12ರಂದು ಚುನಾವಣೆ ನಡೆಯಲಿದ್ದು, ನವಂಬರ್ 14ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಳ್ಳಲಿದೆ.
ಮಾತ್ರವಲ್ಲ, 5 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ಸಹ ನಡೆಯಲಿದೆ. ಚುನಾವಣೆ ಘೋಷಣೆ ಆಗಿರುವ ಆಯಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಇದು ನವಂಬರ್ 14ರವರೆಗೆ ಜಾರಿಯಲ್ಲಿರುತ್ತದೆ. ಸದ್ಯ ನಗರಪಾಲಿಕೆಗೆ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಹಾಕಿರುವ ಬ್ಯಾನರ್, ಫ್ಲೆಕ್ಸ್ ಬೋರ್ಡ್'ಗಳನ್ನು ನಗರಪಾಲಿಕೆಯ ಅಧಿಕಾರಿಗಳು ತೆರವುಗೊಳಿಸುತ್ತಿದ್ದಾರೆ.
ಈಗಾಗಲೇ ಪಾಲಿಕೆಗೆ ಚುನಾವಣೆ ಘೋಷಣೆಯಾಗಿದ್ದು, ನಗರಪಾಲಿಕೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆಯು ಜಾರಿಗೆ ಬಂದಿದೆ. ಹಾಗಾಗಿ ನಗರದ ಎಲ್ಲಾ ವಾರ್ಡುಗಳಲ್ಲಿ ರಾಜಕೀಯ ಪಕ್ಷಗಳು, ರಾಜಕೀಯ ಮುಖಂಡರ ಚಿತ್ರ ಇರುವ ಎಲ್ಲಾ ರೀತಿಯ ಕಟೌಟ್, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್'ಗಳನ್ನು ಸಂಬಂಧಪಟ್ಟವರು ತಕ್ಷಣದಿಂದಲೇ ತೆರವುಗೊಳಿಸಲು ಮಹಾನಗರಪಾಲಿಕೆ ಆಯುಕ್ತ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಸೂಚನೆ ನೀಡಿದ್ದರು.